ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ. ಚುನಾವಣೆ ಘೋಷಣೆಗೆ ಮುನ್ನವ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದೀಗ ಎರಡನೇ ಪಟ್ಟಿ ಪ್ರಕಟಿಸಿದ್ದು, 42 ಅಭ್ಯರ್ಥಿಗಳಲ್ಲಿ ದಾವಣಗೆರೆ ಜಿಲ್ಲೆ ಒಂದು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಘೋಷಣೆಯಾಗಿದೆ. ಚನ್ನಗಿರಿಯಿಂದ ಹೊಸ ಮುಖ ಬಸವರಾಜ್ ವಿ .ಶಿವಗಂಗಾಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಇದುವರೆಗೂ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ.
Congress releases second list of 42 candidates for Karnataka Assembly elections pic.twitter.com/wzpumgNTf3
— ANI (@ANI) April 6, 2023
ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ಘೋಷಣೆ ಆಗಿಲ್ಲ. ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಲು ವಿರೋಧ ಇದೆ. ಈ ಹಿನ್ನೆಲೆಯಲ್ಲಿ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಟಿಕೆಟ್ ಘೋಷಣೆ ಆಗದ ಹಿನ್ನೆಲೆಯಲ್ಲಿ ಅವರು ಜಮೀರ್ ಅಹ್ಮದ್ ಖಾನ್ ಮೂಲಕ ಸಾಕಷ್ಟು ಲಾಬಿ ನಡೆಸಿದ್ದರು.
ಆದರೆ, ಎರಡನೇ ಪಟ್ಟಿಯಲ್ಲೂ ಅಖಂಡ ಶ್ರೀನಿವಾಸ್ ಮೂರ್ತಿ ಹೆಸರು ಕಾಣಿಸಿಕೊಂಡಿಲ್ಲ. ಜೊತೆಗೆ ಲಿಂಗಸುಗೂರಿನ ಹಾಲಿ ಶಾಸಕ ಡಿಎಸ್ ಹುಲಗೇರಿ, ಹರಿಹರ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ, ಕುಂದಗೋಳದ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ಘೋಷಣೆ ಆಗಿಲ್ಲ.
ಕಳೆದ ಬಾರಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಿಂದ ಭೀಮಸೇನ್ ಬಿ. ಚಿಮ್ಮನಕಟ್ಟಿಗೆ ಟಿಕೆಟ್ ನೀಡಲಾಗಿದೆ. ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡದಿಂದ ಟಿಕೆಟ್ ನೀಡಲಾಗಿದೆ. ಇತ್ತ, ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ ದತ್ತ ಬದಲಿಗೆ ಆನಂದ್‌ಗೆ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಬಿಟ್ಟು ಬಂದಿದ್ದ ಎಸ್.ಆರ್ ಶ್ರೀನಿವಾಸ್ ಅವರಿಗೆ ಗುಬ್ಬಿಯಲ್ಲಿ ಟಿಕೆಟ್ ಸಿಕ್ಕಿದೆ. ಇತ್ತೀಚೆಗೆ ಬಿಜೆಪಿ ತೊರೆದಿದ್ದ ಕೂಡ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮುರಿಂದ ಟಿಕೆಟ್ ನೀಡಲಾಗಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ.ಪಿ. ವಿರೇಂದ್ರಗೆ (ಪಪ್ಪಿ) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ.
ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಪದ್ಮನಾಭನಗರದಿಂದ ವಿ.ರಘುನಾಥ ನಾಯ್ಡುಗೆ ಟಿಕೆಟ್ ಘೋಷಿಸಲಾಗಿದೆ.ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಮಣೆ ಹಾಕಲಾಗಿದ್ದು, ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
ಬಾಗಲಕೋಟೆ ಜಿಲ್ಕೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ. ಮೇಟಿ, ಬಾದಾಮಿ ಕ್ಷೇತ್ರದಿಂದ ಭೀಮಸೇನ ಚಿಮ್ಮನಕಟ್ಟಿ, ಬೀಳಗಿ ಕ್ಷೇತ್ರದಿಂದ ಜೆ.ಟಿ. ಪಾಟೀಲ ಹಾಗೂ ಮುಧೋಳ ಕ್ಷೇತ್ರದಿಂದ ಅರ್. ಬಿ. ತಿಮ್ಮಾಪುರ ಅವರಿಗೆ ಟಿಕೆಟ್ ನೀಡಲಾಗಿದೆ.ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ ಚಿಂಚನಸೂರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಈಗಾಗಲೇ ಹುನಗುಂದ, ಜಮಖಂಡಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. ತೇರದಾಳ ಕ್ಷೇತ್ರಕ್ಕೆ ಉಮಾಶ್ರೀ ಸೇರಿದಂತೆ ಹಲವರು ಆಕಾಂಕ್ಷಿಗಳು ಇರುವುದರಿಂದ ಒಮ್ಮತ ಮೂಡದ್ದರಿಂದ ಘೋಷಣೆ ಮಾಡಿಲ್ಲ. ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರಕ್ಕೆ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ. ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ. ಪೈಪೋಟಿ ಹೆಚ್ಚಿರುವ ಕುಮಟಾ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಿಲ್ಲ.