ಬೆಂಗಳೂರು: ಖಾಸಗಿ ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡದಂತೆ ಆಡಳಿತ ಮಂಡಳಿಗೆ ಸರ್ಕಾರ ತಡೆ ನೀಡಿದ್ದು, ಈ ಬಗ್ಗೆ ಮಾರ್ಗಸೂಚಿ ಅಥವಾ ಸುತ್ತೋಲೆ ಬಿಡುಗಡೆ ಮಾಡುವವರೆಗೆ ನೇಮಕಾತಿಗೆ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಿದೆ.
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 2016ರ ಜನವರಿ ಒಂದರಿಂದ 2020ರ ಡಿಸೆಂಬರ್ 31ರ ವರೆಗಿನ ಅವಧಿಯಲ್ಲಿ ನಿವೃತ್ತಿ, ನಿಧನ ಮತ್ತು ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಆಯುಕ್ತೆ ಬಿ.ಬಿ. ಕಾವೇರಿ ಅವರು ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 2016 -2020ರ ಅವಧಿಯಲ್ಲಿ ಖಾಲಿಯಾಗಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ, ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿ ಅಥವಾ ಸುತ್ತೋಲೆ ಹೊರಡಿಸುವ ಮುಂಚಿತವಾಗಿಯೇ ಕೆಲವು ಜಿಲ್ಲೆಗಳ ಉಪನಿರ್ದೇಶಕರು ಹುದ್ದೆ ಭರ್ತಿ ಅನುಮತಿ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆಯುಕ್ತರು ಈ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾರ್ಗಸೂಚಿ, ಸುತ್ತೋಲೆ ಬಿಡುಗಡೆ ಮಾಡುವ ವರೆಗೆ ನೇಮಕಾತಿಗೆ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಸಂಬಂಧಿತ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.