ಗದಗ: ಕೇಂದ್ರದಿಂದ ಬಂದ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಶೀಘ್ರವೇ ಜಮೆ ಮಾಡಲಾಗುವುದು. ಜತೆಗೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಹಣಕ್ಕೆ ಹೋರಾಟ ಮುಂದುವರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಕೇಳಿದ್ದು 18,172 ಕೋಟಿ ರೂ., ಕೇಂದ್ರ ಸರ್ಕಾರ ಕೊಟ್ಟಿದ್ದು 3,454 ಕೋಟಿ ರೂ.ಅಂದರೆ, ನಾವು ಕೇಳಿದ್ದರಲ್ಲಿ ಶೇ. 19ರಷ್ಟು ಹಣವನ್ನು ಮಾತ್ರ ಕೊಟ್ಟಿದೆ.ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಬರ ಪರಿಹಾರಕ್ಕೆ ಸಂಬಂಧಪಟ್ಟ ಎಲ್ಲ ವರದಿಗಳನ್ನು ಒಪ್ಪಿಸುವಂತೆ ಸೂಚಿಸಿದೆ. ರಾಜ್ಯದ 33.60 ಲಕ್ಷ ಮಂದಿ ರೈತರಿಗೆ ಮೊದಲ ಕಂತಿನಲ್ಲಿ ಬರ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದೆ. ಈಗ ಕೇಂದ್ರದಿಂದ ಬಂದಿರುವ ಹಣದಲ್ಲಿ ಅವರಿಗೆ ನೀಡಬೇಕಿರುವ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಹಾಕುತ್ತೇವೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಕ್ಕೆ ಬರಬೇಕಿದ್ದ ಬರ ಪರಿಹಾರವನ್ನು ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಪಡೆದುಕೊಂಡಿದೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.



