ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವನಿಟ್ಟಿನಲ್ಲಿ ‘ಶಿಕ್ಷಣಕ್ಕೆ ಸಹಾಯ’ ಯೋಜನೆಯಡಿಯಲ್ಲಿ 30,000 ಕಂಪ್ಯೂಟರ್ ಗಳನ್ನು ಒದಗಿಸುವ ಒಪ್ಪಂದಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಸಹಿ ಹಾಕಿದ್ದಾರೆ. 12,500 ಡೆಸ್ಕ್ ಟಾಪ್ ಕಂಪ್ಯೂಟರ್ ಒದಗಿಸಲು ಕಾಗ್ನಿಜೆಂಟ್ ಕಂಪನಿ ಮುಂದೆ ಬಂದಿದೆ.
ಈ ವೇಳೆ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ಈ ಯೋಜನೆಯಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೊರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಡಿಜಿಟಲ್ ಕಲಿಕೆಯತ್ತ ತಮ್ಮನ್ನು ಅಳವಡಿಸಿಕೊಳ್ಳಲು ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸರ್ಕಾರಿ ಕಾಲೇಜುಗಳಿಗೆ ಸುಮಾರು 30,000 ಕಂಪ್ಯೂಟರ್‌ಗಳ ಅಗತ್ಯವಿದೆ. ಆ ಪೈಕಿ ಈಗ 12,500 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಸುಮಾರು 50 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ವಿದ್ಯಾರ್ಥಿಗಳಲ್ಲಿ ಡಿಜಿಟಲ್ ತಾರತಮ್ಯ ಹೋಗಲಾಡಿಸಿ, ಆಧುನಿಕ ಕಲಿಕೆಯತ್ತ ಅವರನ್ನು ಕರೆದೊಯ್ಯುವುದು ಇದರ ಪ್ರಮುಖ ಅಂಶವಾಗಿದೆ. ಈ ಯೋಜನೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸುತ್ತಿವೆ ಎಂದರು.
ಕಾಗ್ನಿಜೆಂಟ್ ಇಂಡಿಯಾ ಪ್ರೈ. ಲಿಮಿಟೆಡ್ ಇಲಾಖೆಗೆ 12,500 ಡಿ-ಬಾಂಡೆಡ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಒದಗಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ರೋಟರಿ ಕ್ಲಬ್‌ನವರು ವಿಂಡೋಸ್ ಓಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್ ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.



