ದಾವಣಗೆರೆ: ಮೆಕ್ಕೆಜೋಳ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಹಾಗೂ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಲು ಮೆಕ್ಕೆಜೋಳದೊಂದಿಗೆ ತೊಗರಿ ಅಂತರ ಬೆಳೆಯಾಗಿ ಬೆಳೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ. ಶಾಂತಕುಮಾರಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು, ಸದ್ಯ ಕ್ವಿಂಟಾಲ್‍ಗೆ ರೂ. 1400 ರಿಂದ 1600 ರವರೆಗೆ ಮಾತ್ರ ಇದೆ. ಬೆಂಬಲ ಬೆಲೆಯಲ್ಲಿ ಖರೀದಿಸಲೂ ಸಾಧ್ಯವಾಗಿಲ್ಲ. ಈ ರೀತಿ ಆದರೆ ಮೆಕ್ಕೆಜೋಳ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯಕ್ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸುಮಾರು 1.34 ಲಕ್ಷ ಹೆಕ್ಟೇರ್‍ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಮಳೆ ಉತ್ತಮವಾಗಿ ಆಗಿದ್ದರಿಂದ ಇಳುವರಿಯೂ ಚೆನ್ನಾಗಿ ಬಂದಿದೆ. ಆವಕ ಹೆಚ್ಚಾಗಿರುವುದರಿಂದ, ಬೆಲೆ ಕಡಿಮೆಯಿದೆ, ಅಲ್ಲದೆ ಬೇಡಿಕೆಯೂ ಕುಸಿದಿದೆ. ಸುಮಾರು 5 ಲಕ್ಷ ಟನ್ ನಷ್ಟು ಮೆಕ್ಕೆಜೋಳಕ್ಕೆ ಆಂತರಿಕ ಬೇಡಿಕೆ ಇಲ್ಲದ ಕಾರಣ ಹೊರಗಡೆ ಮಾರಾಟವಾಗುವ ಸ್ಥಿತಿ ಇದೆ. ರೈತರು ಸತತವಾಗಿ ಮೆಕ್ಕೆಜೋಳವನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಿರುವುದರಿಂದ ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತಿದ್ದು, ಹೊಸ ಹೊಸ ಕೀಟ, ರೋಗಬಾಧೆ ಬೆಳೆಗೆ ಕಾಣಿಸುತ್ತಿದೆ. ಆರ್ಥಿಕ ನಷ್ಟದಿಂದ ಪಾರಾಗಲು, ಮಣ್ಣಿನ ಫಲವತ್ತತೆ ಉಳಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಬೆಳೆಗಳನ್ನು ಕಂಡುಕೊಳ್ಳಲು ರೈತರು ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತವಾಗಿದೆ ಎಂದರು.
ತೊಗರಿಗೆ ಸಾಮಾನ್ಯವಾಗಿ ಉತ್ತಮ ಬೇಡಿಕೆ ಹಾಗೂ ದರ ಸಿಗುತ್ತದೆ. ಸದ್ಯ ತೊಗರಿ ಕ್ವಿಂಟಾಲ್‍ಗೆ 5600 ರಿಂದ 6500 ರೂ. ದರ ದೊರೆಯುತ್ತಿದೆ. ಹೀಗೆ ಮಾಡುವುದರಿಂದ ರೈತರಿಗೆ ಆರ್ಥಿಕವಾಗಿ ಲಾಭವಾಗಿ, ಕೀಟ ಹಾಗೂ ರೋಗಬಾಧೆ ತಡೆಯಬಹುದು. ಅಂತರ ಬೆಳೆಯಾಗಿ ಬೆಳೆಯಲು ಅನುಕೂಲವಾಗುವಂತೆ ತೊಗರಿ ಬಿತ್ತನೆ ಬೀಜವನ್ನು 01 ಕೆ.ಜಿ. ಪಾಕೆಟ್‍ನಲ್ಲಿಯೂ ದೊರೆಯುವಂತೆ ಮಾಡಬೇಕಿದೆ. ಜಿಲ್ಲೆಯಲ್ಲಿ ಸದ್ಯ ಶೇ. 98.20 ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಅತಿವೃಷ್ಟಿಯಿಂದ 294.34 ಹೆ. ಪ್ರದೇಶದಲ್ಲಿ ಹಾನಿಯಾಗಿತ್ತು. 32.27 ಲಕ್ಷ ಪರಿಹಾರ ಮೊತ್ತ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಮೀಕಾಂತ್ ಮಾತನಾಡಿ, ಕೋವಿಡ್ ಕಾರಣದಿಂದ ಹಣ್ಣು, ತರಕಾರಿ ಬೆಳೆಯಲ್ಲಿ ನಷ್ಟ ಅನುಭವಿಸಿದ ರೈತರಿಗೆ 4.25 ಕೋಟಿ ರೂ. ಪರಿಹಾರಧನ ವಿತರಣೆ ಮಾಡಲಾಗಿದೆ. ಇನ್ನೂ ಸುಮಾರು 2.60 ಕೋಟಿ ರೂ. ಪರಿಹಾರ ಬಿಡುಗಡೆಯಾಗಬೇಕಿದೆ. ಬೆಳೆ ಸಮೀಕ್ಷೆಯಲ್ಲಿ ಬಿಟ್ಟುಹೋದ ರೈತರ ಮಾಹಿತಿಯನ್ನು ಸಂಗ್ರಹಿಸಿ ಪರಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಆಸಕ್ತ ರೈತ ಮಹಿಳೆಯರ ಗುಂಪುಗಳನ್ನು ರಚಿಸಿ, ಅವರಿಗೆ ಅಣಬೆ ಬೇಸಾಯ, ಜೇನುಕೃಷಿ, ತಾರಸಿ ಕೈತೋಟದಂತಹ ಚಟುವಟಿಕೆಗಳ ತರಬೇತಿ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.