ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಯುಬಿಡಿಟಿ ಕಾಲೇಜಿನಲ್ಲಿ ಯುಬಿಡಿಟಿ ಕಾಲೇಜಿನ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ನ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ “ನವಭಾರತದ ಯುವ ಉತ್ಸವ” ಎಂಬ ಶೀರ್ಷಿಕೆ ಅಡಿಯಲ್ಲಿ ಸ್ವಾಮಿ ವಿವೇಕಾನಂದರ 158ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಗಿಡಕ್ಕೆ ನೀರೆರೆದು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಆಗಮಿಸಿದ ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ್ ಮಾತನಾಡಿ, ಯುವಕರು ತಮ್ಮಲ್ಲಿರುವ ಕಲೆಗಳನ್ನು ಹೊರತೆಗೆದು ದೇಶದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜತೆಗೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಆತ್ಮ ನಿರ್ಭರ ಭಾರತ ದಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಲ್. ಮನೀಶ್ ಆಸ್ತಾನಾ ಮಾತನಾಡಿ, ಯುವ ವೀರಯೋಧರಾದ ಮನೀಶ್ ಪಾಂಡೆ,ವಿಕ್ರಮ್ ಬಾತ್ರಾ ಅಂಥವರ ಬಲಿದಾನವನ್ನು ಸ್ಮರಿಸಿದರು. ಯೂಸುಫ್ ಮಲಾಲಾ ಎಂಬ ಬಾಲಕಿ ಹೋರಾಡಿದ ಬಗ್ಗೆಯೂ ತಿಳಿಸುತ್ತಾ, ಯುವಜನತೆ ಎಲ್ಲಾ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.
ಎಬಿವಿಪಿ ದಾವಣಗೆರೆ ಮಹಾನಗರಾಧ್ಯಕ್ಷ ಪವನ್ ರೇವಣಕರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಅನೇಕ ವಿಜ್ಞಾನಿಗಳಿಗೆ ಹಾಗೂ ಸಾಧಕರಿಗೆ ಪ್ರೇರಣೆಯಾಗಿದ್ದರು.ಯುವ ಜನತೆ – ತಾಂತ್ರಿಕ ವಿದ್ಯಾರ್ಥಿಗಳು ಇವರಿಂದ ಪ್ರೇರಣೆಗೊಂಡು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಯುಬಿಡಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ್.ಎಸ್ .ಹೋಳಿ ,ಕಾಲೇಜಿನ ಡೀನ್ ಡಾ.ಎಚ್.ಈರಮ್ಮ ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಎಬಿವಿಪಿಯ ರಾಜ್ಯ ಕಾರ್ಯಕಾರಣಿ ಸದಸ್ಯ ಶರತ್ ,ನಗರ ಕಾರ್ಯಕಾರಣಿ ಸದಸ್ಯರಾದ ರವಿ, ಅಂಬರೀಶ್, ಎಬಿವಿಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಆಕಾಶ್ ಇಟಗಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.



