ದಾವಣಗೆರೆ: ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಶೇ.190ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿ ಕೋಡಿ ಬಿದ್ದಿವೆ. ಇದರಿಂದ, ಮನೆ, ಬೆಳೆ ನಷ್ಟ ಆಗಿದೆ. ಬೆಳೆ ನಷ್ಟದ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡು, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾನಿಗೆ ಒಳಗಾದ ಹಿರೇಮಲ್ಲನಹೊಳೆ ಕೆರೆ ಕೋಡಿ ಬಳಿಯ ಮನೆಗಳ ಸ್ಥಳಾಂತರ ಮಾಡಿ, ಸಂತ್ರಸ್ತರಿಗೆ ಬೇರೆಡೆ ನಿವೇಶನ, ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಗಳೂರು ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಮಲ್ಲನಹೊಳೆ ಗ್ರಾಮದ ಕೆರೆ ಕೋಡಿಯಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿದ್ದಾರೆ. ಇದರ ಪರಿಣಾಮ ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಎಲ್ಲ 35 ಮನೆಗಳನ್ನು ಬೇರೆಡೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದರು.
ಮನೆ ಪರಿಹಾರದ ಜೊತೆಗೆ ಬೇರೆಡೆ ನಿವೇಶನ ನೀಡಿ, ಅಂತಹ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಮುಂದಿನ 2 ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ಅನೇಕ ಮನೆಗಳು ಕುಸಿದಿವೆ. ಮನೆಗಳಿಗೆ ಪರಿಹಾರದ ಜೊತೆಗೆ ಬದಲಿ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.



