ದಾವಣಗೆರೆ: ಮುಖ್ಯಮಂತ್ರಿ ಪದವಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮಾಡಿದರೆ ಏನು ಸಿಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಟೆಂಪಲ್ ಗಿಂತ ಕಾಂಗ್ರೆಸ್ ನ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ನ ಸುತ್ತಿ ಕಪ್ಪ ಕಾಣಿಕೆ ನೀಡಿದರೆ ಮಾತ್ರ ನೀವು ಮುಖ್ಯಮಂತ್ರಿ ಆಗುತ್ತೀರಿ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಒಂದು ರೀತಿಯ ಒಡೆದ ಮನೆ. ಈ ಸರ್ಕಾರ ನವೆಂಬರ್ – ಡಿಸೆಂಬರ್ ನಲ್ಲಿ ಹಾಳಾಗಿ ಹೋಗಲಿ ಎಂದು ಜನರು ಹೇಳುತ್ತಿದ್ದಾರೆ ದೂರಿದರು.
ಸರ್ಕಾರ ಹಣವಿಲ್ಲದ ಖಾಲಿ ಡಬ್ಬ
ರಾಜ್ಯ ಸರ್ಕಾರ ಎಲ್ಲಾ ಕಡೆ ವಿಫಲವಾಗಿದೆ. ರಾಜ್ಯ ಸರ್ಕಾರಕ್ಕೆ ಮಾರ್ಕ್ಸ್ ಕೊಡಬೇಕು ಎಂದರೆ ಎಲ್ಲಾ ಕ್ಷೇತ್ರದಲ್ಲಿ ಸೊನ್ನೆ ಕೊಡಬೇಕಿದೆ. ಸರ್ಕಾರದಲ್ಲಿ ಹಣವಿಲ್ಲದೆ ಖಾಲಿ ಡಬ್ಬದ ಹಾಗೆ ಶಬ್ಧ ಮಾಡುತ್ತಿದೆ. ನಾವು ಮಾಡಿದ ರಸ್ತೆ ಫ್ಲೈ ಓವರ್ ಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ದೂರಿದರು.
ಪಾಪರ್ ಸರ್ಕಾರ
ಸರ್ಕಾರದಲ್ಲೇ ಹಣ ಇಲ್ಲ, ಅನುದಾನ ಎಲ್ಲಿ ಸಿಗುತ್ತದೆ ಹೇಳಿ. ಬಜೆಟ್ ನಲ್ಲಿ ಉಳಿದ ಹಣದಲ್ಲಿ ಬಡ್ಡಿ ಕಟ್ಟುವುದೋ ಅಥವಾ ಡಿಕೆಶಿ ಸಿದ್ದರಾಮಯ್ಯ ಮನೆ ರಿಪೇರಿ ಮಾಡಿಸಿಕೊಳ್ಳುವುದೋ ಆಗಿದೆ. ಇದೊಂದು ಪಾಪರ್ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನ ತಾತಾ ಮುತ್ತಾತನ ಕಾಲದಿಂದಲೂ ಆರ್‌ಎಸ್‌ಎಸ್ ಇದೆ
ಹಳ್ಳ ಬಿದ್ದಿರುವ ರಸ್ತೆಯನ್ನು, ಅಭಿವೃದ್ಧಿ ಇಲ್ಲದೆ ಇರುವುದನ್ನು ಡೈವರ್ಟ್ ಮಾಡಲು ಪ್ರಿಯಾಂಕ ಖರ್ಗೆ ಅವರನ್ನು ಮುಂದೆ ಬಿಟ್ಟರು. ಅವರು ಈಗ ಆರ್ ಎಸ್‌ಎಸ್ ಎಳೆತಂದು ಅಭಿವೃದ್ಧಿ ವಿಚಾರ ಸರ್ಕಾರದ ವೈಫಲ್ಯ ಮೂಲೆಗುಂಪು ಮಾಡಿದ್ದಾರೆ ಎಂದು ಹರಿಹಾಯ್ದರು. ಕಾಂಗ್ರೆಸ್ ನ ತಾತಾ ಮುತ್ತಾತನ ಕಾಲದಿಂದಲೂ ಆರ್‌ಎಸ್‌ಎಸ್ ಇದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದರ ಬಗ್ಗೆ ಚಕಾರ ಎತ್ತಿಲ್ಲ. ಈ ಬಾರಿ ಆರ್‌ಎಸ್‌ಎಸ್ ಬಗ್ಗೆಮಾತನಾಡುತ್ತಾರೆ ಎಂದು ತಿಳಿಸಿದರು
ಡಿಕೆ ಶಿವಕುಮಾರ್ ಗೆ ಎರಡು ನಾಮ
ನಾನು ನವೆಂಬರ್ ಕ್ರಾಂತಿ ಎಂದರೆ ಬುರುಡೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಈಗ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಹೇಳಿದಾಗ ಅದು ಕಾಂಗ್ರೆಸ್ ನವರಿಗೆ ಸರಿಯಾಗಿದೆ. ರಾಜಣ್ಣ ಹೇಳಿದಾಗ ಪಾಪಾ ಆತನನ್ನು ಓಡಿಸಿಯೇ ಬಿಟ್ಟರು. ಯಾರೆಲ್ಲಾ ನವೆಂಬರ್ ಕ್ರಾಂತಿ ಎಂದು ಹೇಳಿದರೋ ಅವರನ್ನು ಬೋರ್ಡ್ ನಲ್ಲಿ ಇಲ್ಲದಂತೆ ಓಡಿಸಿದ್ದೀರಿ. ಈಗ ಯತೀಂದ್ರ ಹೇಳಿರುವುದು ನೋಡಿದರೆ ಡಿಕೆಶಿಗೆ ಪಂಗನಾಮ ಎಂದು ಗೊತ್ತಾಗುತ್ತದೆ. ಈಗ ಡಿಕೆ ಶಿವಕುಮಾರ್ ಎರಡು ನಾಮ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿದ್ದಾರೆ. ಡಿಕೆಶಿಗೆ ಮೂರನೇ ನಾಮವನ್ನು ಯತೀಂದ್ರ ಸಿದ್ದರಾಮಯ್ಯ ಹಾಕಿದ್ದು, ಸತೀಶ್ ಜಾರಕಿಹೊಳಿಗೆ ಪಟ್ಟ ಕಟ್ಟಲು ದಾರಿ ಮಾಡಿ. ಡಿಕೆಶಿಗೆ ನಾಮ ಹಾಕುವುದು ಪಕ್ಕಾ ಆಗಿದೆ. ಒಂಥರ ದಾರಿ ತಪ್ಪಿದ ಮಗ ಆಗಿದ್ದಾರೆ ಎಂದರು.
ಕಾಂಗ್ರೆಸ್ ಬಂದಮೇಲೆ 60% ಕಮಿಷನ್
ಗುತ್ತಿಗೆದಾರರರಿಗೆ 33 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ಮಾಡಬೇಕಿದೆ. ನಮ್ಮ ಸರ್ಕಾರದ ಕಾಲದಲ್ಲಿ ಕೆಂಪಣ್ಣ ಎನ್ನುವನನ್ನು ತಂದು ಅರೋಪ ಮಾಡಿದರು. ಯಾವ ಕೋರ್ಟ್ ನಲ್ಲಿಯೂ ಕೂಡ ನಿಲ್ಲಲಿಲ್ಲ. ಸಾಕ್ಷಿ ಹೇಳಲು ಕೂಡ ಯಾರು ಬರಲಿಲ್ಲ. ಬಿಜೆಪಿ ಸಂದರ್ಭದಲ್ಲಿ 40 % ಇರಲಿಲ್ಲ, ಆದರೆ ಈ ಕಾಂಗ್ರೆಸ್ ಬಂದಮೇಲೆ 60% ಕಮಿಷನ್ ಇದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ಅಶೋಕ್ ಹೇಳಿದರು.
ಕಾಂಗ್ರೆಸ್ ಸಚಿವರನ್ನು ಡಿನ್ನರ್ ಪಾರ್ಟಿ ಗೆ ಕರೆದಿದ್ದರು. ಅದು ಡಿನ್ನರ್ ಪಾರ್ಟಿ ಅಲ್ಲ ಬಿಹಾರ್ ಚುನಾವಣೆಗೆ ಕಲೆಕ್ಷನ್ ಪಾರ್ಟಿ. ಯಾವ ಯಾವ ಸಚಿವರು ಎಷ್ಟು ಕೊಡುತ್ತೀರಿಎಂದು ಹೇಳಿದ್ದೇ ತಡ ಕೆಲವರು ಊಟ ಮಾಡದೆ ಓಡಿ ಹೋದರು ಎಂದು ವ್ಯಂಗ್ಯವಾಡಿದರು. ಸಚಿವರಿಗೆ 300 ರಿಂದ 400 ಕೋಟಿ ಕಲೆಕ್ಷನ್ ಎಂದು ಹೇಳದ್ದು, ಸಚಿವ ಸ್ಥಾನ ಉಳಿಯಬೇಕೆಂದರೆ ಟಾರ್ಗೆಟ್ ರೀಚ್ ಮಾಡಬೇಕು ಎಂದು ಹೇಳಿದ್ದಾರೆ. ಕೊಟ್ಟ ಹಣ ವಸೂಲಿಯಾದರೆ ಸಚಿವರಾಗಿ ಮುಂದುವರೆಯುತ್ತಾರೆ. ಇಲ್ಲವಾದರೆ ಗೇಟ್ ಪಾಸ್ ನೀಡುತ್ತಾರೆ ಎಂದರು.