ದಾವಣಗೆರೆ: ಹರಿಹರ ನಗರಸಭೆ ಕಿರಿಯ ಅಭಿಯಂತರ ಹೆಚ್.ಟಿ ನೌಷಾದ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹರಿಹರ ನಗರಸಭೆಯಲ್ಲಿ ಕಿರಿಯ ಅಭಿಯಂತರರಾಗಿ ಮಲೇಬೆನ್ನೂರು ಪುರಸಭೆಯಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು 2020-21 ನೇ ಸಾಲಿನ ಹದಿನೈದನೇ ಹಣಕಾಸಿನ ಯೋಜನೆಯಡಿ ಕ್ರಿಯಾ ಯೋಜನೆಗೆ ಮುಂಜೂರಾತಿ ನೀಡುವ ಆದೇಶದಲ್ಲಿನ ಕಾಮಗಾರಿಗಳಲ್ಲಿ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸಲು ಆದೇಶಿಸಲಾಗಿತ್ತು.
ಈ ಆದೇಶವನ್ನು ಉಲ್ಲಂಘಿಸಿ ಮ್ಯಾನುಯೆಲ್ ಟೆಂಡರ್ ಮುಖಾಂತರ ಸ್ಥಳೀಯ ದಿನ ಪತ್ರಿಕೆಯಲ್ಲಿ ಟೆಂಡರ್ ಪ್ರಕಟಿಸಿ ಕರ್ನಾಟಕ ಪಾರದರ್ಶಿಕ ಅಧಿನಿಯಮ 2000 ನಿಯಮ (17) ರಂತೆ ಕೆಡಬ್ಲೂ-1 ಪ್ರಕಾರ ಟೆಂಡರ್ ಅವಧಿಯನ್ನು 15 ದಿನಗಳಿಗೆ ನಿಗದಿಪಡಿಸಿದ್ದರೂ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ 45 ದಿನಗಳ ದೀರ್ಘಾವಧಿ ಟೆಂಡರನ್ನು ಆಹ್ವಾನಿಸಿರುತ್ತಾರೆ. ಟೆಂಡರ್ ಪ್ರಕಟಣೆಯನ್ನು ಮುಕ್ತವಾಗಿ ಪ್ರಚುರ ಪಡಿಸದೇ ಇರುವುದು ಕಂಡುಬಂದಿದೆ.
ಸಹಾಯಕ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ನಗರಾಭಿವೃದ್ದಿ ಕೋಶ ಇವರ ತನಿಖಾ ವರದಿಯಂತೆ ಕಿರಿಯ ಅಭಿಯಂತರ ನೌಷಾದ್‍ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿರುತ್ತಾರೆ.