ದಾವಣಗೆರೆ: ಮನೆ ಬಾಗಿಲಿಗೆ ಮಹಾನಗರಪಾಲಿಕೆ ಕಾರ್ಯಕ್ರಮ ರಾಜ್ಯದಲ್ಲಿಯೇ ಒಂದು ವಿನೂತನ ಕಾರ್ಯಕ್ರಮ. ಜನರಿಂದ ಉತ್ತಮ ಸ್ಪಂದನ ದೊರಕಿದೆ. ಮೇಯರ್ ಅಜಯ್ ಕುಮಾರ್ ಉತ್ತಮವಾಗಿ ಕೆಲಸ ಮಾಡಿ ತೋರಿಸಿದ್ದಾರೆ ಎಂದು ಶಾಸಕ ರವೀಂದ್ರನಾಥ್ ಶ್ಲಾಘಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಮನೆ ಬಾಗಿಲಿಗೆ ಮಹಾ ನಗರಪಾಲಿಕೆ ಸಮಾರೋಪದಲ್ಲಿ ಮಾತನಾಡಿದರು.
ಹೊಸ ಕಾರ್ಯಗಳಿಗೆ ವಿರೋಧ ಪಕ್ಷಗಳು ಟೀಕೆ ಮಾಡುವುದು ಸಹಜ.ಆದರೆ, ಮುನ್ನುಗ್ಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು
ಮೇಯರ್ ಬಿ.ಜಿ. ಅಜಯ್‍ಕುಮಾರ್, ಈ ಕಾರ್ಯಕ್ರಮಕ್ಕೆ ಹೊಗಳುವುದು, ತೇಗಳುವುದು ಮುಖ್ಯವಲ್ಲ.ಈ ಕಾರ್ಯಕ್ರಮದ ಹಿಂದೆಯೂ ಚರ್ಚೆ ನಡೆಯುತ್ತಿತ್ತು. ಮುಂದೆಯೂ ನಡೆಯುತ್ತದೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಆಗುತ್ತಿಲ್ಲ ಎಂಬ ಹಣೆಪಟ್ಟಿ ಇತ್ತು. ಜನರು ನಂಬಿಕೆ ಕಳೆದುಕೊಂಡಿದ್ದರು. ಪಾಲಿಕೆಯಲ್ಲಿ ಪಾರದರ್ಶಕತೆ ತರಬೇಕೆಂಬ ಉದ್ದೇಶ ದಿಂದ ಈ ವಿನೂತನ ಕಾರ್ಯ ಕ್ರಮ ಜಾರಿಗೆ ತಂದಿದ್ದೇವೆ ಎಂದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಕಾರ್ಯಕ್ರಮದಲ್ಲಿ 1.45 ಕೋಟಿ ನೀರಿನ ಕಂದಾಯ ವಸೂಲಿ ಆಗಿದೆ. 70 ಲಕ್ಷ ತೆರಿಗೆ ಸಂಗ್ರಹವಾಗಿದೆ. ಹೆಚ್ಚು ಪ್ರಗತಿ ಆಗಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ , ಈ ಕಾರ್ಯಕ್ರಮ ವಿಫಲವಾಗಿದೆ ಎನ್ನುವುದು ವಿರೋಧ ಪಕ್ಷದ ನಾಯಕರ ಆರೋಪ. ಆದರೆ ಶೇ 98ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ. ಮನೆ ಬಾಗಿಲಿಗೆ ಮಹಾನಗರಪಾಲಿಕೆ ಶೇ 100ರಷ್ಟು ಯಶಸ್ಸು ಕಂಡಿದೆ ಎಂದರು.



