ದಾವಣಗೆರೆ: ಲಸಿಕೆ ವಿತರಣೆ ತಾಲೀಮು ಯಶಸ್ವಿ; ಲಸಿಕೆ ನೀಡಿಕೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ದಾವಣಗೆರೆ: ಕಳೆದ 10 ತಿಂಗಳಿನಿಂದಲೂ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ವೈರಸ್ ಸೋಂಕು ರೋಗ ನಿಯಂತ್ರಣಕ್ಕಾಗಿ ತಯಾರಿಸಲಾಗಿರುವ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಯೋಜಿಸಿದ್ದು, ಸರ್ಕಾರದ ನಿರ್ದೇಶನದಂತೆ ಇದಕ್ಕಾಗಿ ಜಿಲ್ಲೆಯ 06 ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ವಿತರಣೆ ತಾಲೀಮು ಶುಕ್ರವಾರದಂದು ಯಶಸ್ವಿಯಾಗಿ ನಡೆಸಲಾಯಿತು.

ದಾವಣಗೆರೆಯ ಬಾಷಾ ನಗರದ ನಗರ ಪ್ರಾಥಮಿಕ ಆರೋಗ್ಯ ಸಂಸ್ಥೆಯಲ್ಲಿ ನೈಜ ಲಸಿಕೆ ವಿತರಣೆ ಹೊರತುಪಡಿಸಿ, ಲಸಿಕೆ ವಿತರಣೆಯ ಉಳಿದೆಲ್ಲ ಪ್ರಕ್ರಿಯೆಗಳ ತಾಲೀಮು ಶುಕ್ರವಾರದಂದು ವ್ಯವಸ್ಥಿತವಾಗಿ ಜರುಗಿತು. ಈ ವೇಳೆ ದಾಖಲೆ ಪರಿಶೀಲನೆ, ಲಸಿಕೆ ಸಂಗ್ರಹ ವ್ಯವಸ್ಥೆ, ಸಂಗ್ರಹಗಾರದಿಂದ ಲಸಿಕೆ ಕೇಂದ್ರಕ್ಕೆ ಸಾಗಾಣಿಕೆ, ಲಸಿಕೆ ಪಡೆಯುವವರಿಗೆ ಅಣುಕು ಲಸಿಕೆ ನೀಡಿಕೆ ನಡೆಯಿತು. ಇಲ್ಲಿನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ದೀಪಾ ಎ ಅವರಿಗೆ ಕೋವಿಡ್ ಲಸಿಕೆಯ ತಾಲೀಮು ನಡೆಸಿ, ಅವರ ಮೊಬೈಲ್ ಸಂಖ್ಯೆಯ ದಾಖಲು, ಬಳಿಕ ಮೊಬೈಲ್‍ಗೆ ಒಟಿಪಿ ಕಳುಹಿಸಿ, ಒಟಿಪಿ ಆಧಾರದಲ್ಲಿ ಮಾಹಿತಿ ದಾಖಲಿಸಿ, ಕೋವಿಡ್ ಲಸಿಕೆ ಮೊದಲ ಡೋಸ್ ವಿತರಣೆಯ ಅಣುಕು ತಾಲೀಮು ನಡೆಸಲಾಯಿತು. ಬಳಿಕ ನಿಗಾವಣೆ ಕೊಠಡಿಯಲ್ಲಿ 30 ನಿಮಿಷಗಳ ಕಾಲ ನಿಗಾದಲ್ಲಿರಿಸಿ, ಲಸಿಕೆ ಪಡೆದ ಬಳಿಕ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಕರಪತ್ರ ನೀಡಿಕೆ. 28 ದಿನಗಳ ಬಳಿಕ ಎರಡನೆ ಡೋಸ್ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ತಾಲೀಮು ಕೂಡ ನಡೆಸಲಾಯಿತು.

FB IMG 1610117818354

ಈ ವೇಳೆ ಆರೋಗ್ಯ ಅಧಿಕಾರಿಗಳು, ವೈದ್ಯರು, ಲಸಿಕೆ ನೀಡುವ ಸಿಬ್ಬಂದಿ, ಶುಶ್ರೂಷಕರು, ಸಹಾಯಕ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಲಸಿಕೆ ದಾಸ್ತಾನು, ಸುರಕ್ಷತೆ ಗಮನಿಸುವುದು, ಲಸಿಕೆ ಪಡೆಯಲು ಒಳ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ಬಾಗಿಲು, ನಿಗಾವಣೆ ಕೊಠಡಿ ವ್ಯವಸ್ಥೆಯ ಪರಿಶೀಲನೆ ನಡೆಸಲಾಯಿತು.

ಲಸಿಕೆ ವಿತರಣೆ ಡ್ರೈರನ್ ವ್ಯವಸ್ಥೆಯನ್ನು ಪರಿಶೀಲಿಸಲು ಬಾಷಾ ನಗರದ ನಗರ ಪ್ರಾಥಮಿಕ ಆರೋಗ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಖುದ್ದು ಭೇಟಿ ನೀಡಿದರು.

ಲಸಿಕೆ ವಿತರಣೆ ತಾಲೀಮು ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು, ದಾವಣಗೆರೆ ಜಿಲ್ಲೆಯ 6 ಕಡೆ ಲಸಿಕೆ ವಿತರಣೆ ತಾಲೀಮು ಏರ್ಪಡಿಸಲಾಗಿದೆ. ಯಾವುದೇ ಗೊಂದಲ ಇಲ್ಲದೆ, ಸ್ಪಷ್ಟತೆಯಿಂದ ಡ್ರೈರನ್ ನಡೆಸಲಾಗಿದೆ. ದಿನಕ್ಕೆ 100 ಜನರಿಗೆ ಲಸಿಕೆ ನೀಡಬೇಕಾದ ಗುರಿ ಸಾಧಿಸುವ ಕಾರ್ಯಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ನೀಡಿರುವ ಎಲ್ಲ ಮಾರ್ಗಸೂಚಿಯನ್ನು ಪಾಲಿಸಲಾಗಿದೆ. ದತ್ತಾಂಶ ಸಂಗ್ರಹಣೆಯಿಂದ ಮೊದಲುಗೊಂಡು, ಲಸಿಕಾಕಾರರು ಲಸಿಕೆ ನೀಡಿದ ಬಳಿಕ ಲಸಿಕೆ ಪಡೆದವರನ್ನು ಅರ್ಧ ಗಂಟೆಗಳ ಕಾಲ ಇಲ್ಲಿಯೇ ನಿಗಾದಲ್ಲಿರಿಸಿ, ಮುಂದೆ ಅವರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿ ಕಳುಹಿಸುವುದ ಕೂಡ ತಾಲೀಮು ಮಾಡಲಾಗಿದೆ.

ಜಿಲ್ಲಾಡಳಿತ ನಡೆಸಿದ ಲಸಿಕೆ ತಾಲೀಮು ಅಚ್ಚುಕಟ್ಟಾಗಿ ನಡೆದಿರುವುದು ಸಂತಸದ ಸಂಗತಿಯಾಗಿದೆ. ಮೊದಲ ಹಂತದ ಲಸಿಕೆ ನೀಡಿಕೆಗೆ ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸಜ್ಜಾಗಿದೆ. ಇಡೀ ದೇಶದಲ್ಲಿಯೇ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ದೊಡ್ಡ ಗುರಿ ಇದೆ. ನಮ್ಮ ದೇಶದಲ್ಲಿ ಈ ಹಿಂದೆ ಪೋಲಿಯೋ ಲಸಿಕೆ, ಇಂದ್ರಧನುಷ್ ಸೇರಿದಂತೆ ಹಲವು ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡ ಅನುಭವ ನಮ್ಮ ಆರೋಗ್ಯ ಇಲಾಖೆಗಿದೆ. ಹೀಗಾಗಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸುವ ವಿಶ್ವಾಸವಿದೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ 17500 ಜನರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಅವರ ಎಲ್ಲ ಮಾಹಿತಿ ಸಿದ್ಧವಿದೆ. ಲಸಿಕೆ ಬಂದ ಕೂಡಲೆ, ಆಯ್ದ 17500 ಜನರಿಗೆ ಲಸಿಕೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸಿದ್ಧತೆ ಬಗ್ಗೆ ತೃಪ್ತಿ ಇದೆ. ಡೇಟಾ ಎಂಟ್ರಿ ಇಲ್ಲಿಯೇ ಮಾಡಿದಲ್ಲಿ ಸರ್ವರ್ ಬ್ಯುಸಿಯಂತಹ ತೊಂದರೆ ಕಂಡುಬರುತ್ತಿತ್ತು. ಆದರೆ ಈ ಎಲ್ಲ ಕಾರ್ಯವನ್ನು ಮುಂಚಿತವಾಗಿಯೇ ಮಾಡಿಕೊಂಡಿರುವುದರಿಂದ, ಯಾವುದೇ ತೊಂದರೆ ಇಲ್ಲ. ಲಸಿಕೆ ಪಡೆಯಲು ಬಂದ ಕೂಡಲೆ ಆಧಾರ್ ನಡಿ ಲಿಂಕ್ ಮಾಡಿ, ಒಟಿಪಿ ಜನರೇಷನ್ ಮಾಡಬೇಕಿತ್ತು. ಆದರೆ ಇಡೀ ದೇಶದಲ್ಲಿ ಲಸಿಕೆ ನೀಡಿಕೆ ಕಾರ್ಯ ನಡೆಯುವ ಸಂದರ್ಭದಲ್ಲಿ ಒಟಿಪಿ ಜನರೇಷನ್‍ನಿಂದ ವಿಳಂಬವಾಗುವ ಸಾಧ್ಯತೆಗಳಿತ್ತು. ಆದರೆ ಈಗಾಗಲೆ ಸರ್ಕಾರ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ಬೇರೆ ಗುರುತಿನ ಚೀಟಿ ದಾಖಲೆ ನೋಡಿ, ಕೇಂದ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಉಮಾಶಂಕರ್ ಅವರು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ, ಲಸಿಕೆ ನೀಡಿಕೆಗೆ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಕಾರ್ಯದರ್ಶಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. 6 ಕಡೆ ಲಸಿಕೆ ನೀಡಿಕೆ ತಾಲೀಮು ಮಾಡಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಿಕೆ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ, ಬಾಷಾನಗರದ ಯುಪಿಹೆಚ್‍ಸಿ ವೈದ್ಯಾಧಿಕಾರಿ ಡಾ. ಮಂಜುಳಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ, ಸಮುದಾಯ ಆರೋಗ್ಯ ಕೇಂದ್ರ ಸಂತೆಬೆನ್ನೂರು ಚನ್ನಗಿರಿ, ನಗರ ಆರೋಗ್ಯ ಕೇಂದ್ರ ಭಾಷನಗರ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡಜ್ಜಿ ಹರಿಹರ ತಾಲ್ಲೂಕು ಹಾಗೂ ಎಸ್.ಎಸ್.ಐ.ಎಂ.ಎಸ್ ವೈದ್ಯಕಿಯ ಮಹಾವಿದ್ಯಾಲಯ ದಾವಣಗೆರೆ ಈ ಸಂಸ್ಥೆಗಳಲ್ಲಿ ಕೋವಿಡ್-19 ಡ್ರೈರನ್ ನಡೆಸಲಾಯಿತು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *