ದಾವಣಗೆರೆ: ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ಯಾವುದೇ ಕೋಳಿ ಫಾರಂಗಳಲ್ಲಿ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್‍ನಾಯ್ಕ ತಿಳಿಸಿದ್ದಾರೆ.
ಮಾ.15 ಮತ್ತು 16 ರಂದು ಕೊಂಡಜ್ಜಿ ಗ್ರಾಮದಲ್ಲಿನ ಕೋಳಿ ಫಾರಂಗಳಲ್ಲಿ ಹಕ್ಕಿ ಜ್ವರದಿಂದ ಕೋಳಿಗಳು ಸಾವನ್ನಪ್ಪಿದ್ದಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಮಾ.15 ಮತ್ತು 16 ರಂದು ತಜ್ಞರು ಗ್ರಾ.ಪಂ, ಪಿಡಿಓ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕೊಂಡಜ್ಜಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ಕೋಳಿ ಫಾರಂಗಳ ತಪಾಸಣೆ ಮಾಡಲಾಯಿತು.
ಅರಣ್ಯದಲ್ಲಿ ಕೆಲವು ಸತ್ತ ಕೋಳಿಗಳನ್ನು ಚೀಲದಲ್ಲಿ ತುಂಬಿ ಎಸೆಯಲಾಗಿರುವುದನ್ನು ಕೂಡಾ ಪರಿಶೀಲಿಸಲಾಯಿತು. ಈ ಬಗ್ಗೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಗ್ರಾಮಸ್ಥರೊಡನೆ ಸಂವಾದಿಸಲಾಗಿ, ಸತ್ತ ಕೋಳಿಗಳು ಅಂದಾಜು ಎರಡು ಕೆ.ಜಿ ಗೂ ಮೇಲ್ಪಟ್ಟು ತೂಕವುಳ್ಳವಾಗಿದ್ದು, ಆ ವಯೋಮಾನದ ಮತ್ತು ತೂಕದ ಕೋಳಿಗಳು ಕೊಂಡಜ್ಜಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸದ್ಯಕ್ಕೆ ಇರುವುದು ಕಂಡುಬಂದಿರುವುದಿಲ್ಲ. ಈ ಸತ್ತ ಕೋಳಿಗಳನ್ನು ಗ್ರಾ.ಪಂ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರೊಂದಿಗೆ ವೈಜ್ಞಾನಿಕವಾಗಿ ವಿಲೇ ಮಾಡಲಾಯಿತು.
ಕೋಳಿಗಳಲ್ಲಿ ಶೀತಜ್ವರದ ಲಕ್ಷಣಗಳು ಕಂಡುಬಂದಿರುವುದಿಲ್ಲ. ಅವಶ್ಯಕ ಸೀರಂ, ಟ್ರೇಕಿಯಲ್/ಕ್ಲೊಯಕಲ್ ಸ್ವಾಬ್ ಮತ್ತು ಪರಿಸರ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಫಾರಂ ಮಾಲೀಕರುಗಳು ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೋಳಿಗಳಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.