Connect with us

Dvgsuddi Kannada | online news portal | Kannada news online

ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಪೌಷ್ಠಿಕ ಆಹಾರದ ಕೊರತೆ:  ಡಾ. ಕೆ.ಪಿ. ಬಸವರಾಜ

ಪ್ರಮುಖ ಸುದ್ದಿ

ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಪೌಷ್ಠಿಕ ಆಹಾರದ ಕೊರತೆ:  ಡಾ. ಕೆ.ಪಿ. ಬಸವರಾಜ

ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ಆಹಾರ ಆಧಾರಿತ ಬೆಳೆಗಳಿಗಿಂತ ವಾಣಿಜ್ಯ ಆಧಾರಿತ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ, ಭವಿಷ್ಯದಲ್ಲಿ ಪೌಷ್ಠಿಕಾಂಶಗಳ ಕೊರತೆಯುಂಟಾಗಲಿದೆ ಎಂದು ರಾಜ್ಯ ಜ್ಞಾನ ಆಯೋಗದ ಸದಸ್ಯ ಡಾ. ಕೆ.ಪಿ. ಬಸವರಾಜ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 18 ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರ ಶೇ. 20 ರಷ್ಟು ವ್ಯಾಪ್ತಿ ಹೊಂದಿದ್ದು, ದೇಶದ ಜಿಡಿಪಿ ಅಭಿವೃದ್ಧಿಗೆ ಕೃಷಿ ಕ್ಷೇತ್ರ ಶೇ. 19 ರಿಂದ 20 ರಷ್ಟು ಕಾಣಿಕೆ ನೀಡುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಹಾಗೂ ಮಾರುಕಟ್ಟೆ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗುವುದು ಅಗತ್ಯವಿದೆ ಎಂದರು.

ಸದ್ಯ ಅನುಸರಿಸುತ್ತಿರುವ ಬೆಳೆ ಸಮೀಕ್ಷೆ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಯ ಅಗತ್ಯವಿದ್ದು, ತಂತ್ರಜ್ಞಾನ ಹಾಗೂ ಖಚಿತ ವರದಿ ಆಧಾರಿತ ಸಮೀಕ್ಷೆ ಆಗಬೇಕು. ಇಲ್ಲದಿದ್ದಲ್ಲಿ ಕೃಷಿ ನೀತಿ ರಚಿಸುವುದು ಕಷ್ಟಕರವಾಗಲಿದೆ. ಕೃಷಿ ಮತ್ತು ಮಾರುಕಟ್ಟೆ ಪ್ರಕ್ರಿಯೆಯಲ್ಲಿನ ಸಾಕಷ್ಟು ಅಂಕಿ-ಅಂಶಗಳ ಅವಲೋಕನ, ಪರಿಶೀಲನೆ ಹಾಗೂ ತಜ್ಞರ ವರದಿಯ ಆಧಾರದಲ್ಲಿಯೇ ನೂತನ ಕೃಷಿ ಕಾಯ್ದೆಯನ್ನು ಸರ್ಕಾರ ರೂಪಿಸಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ಉದಾಹರಣೆಗೆ ಮೆಕ್ಕೆಜೋಳ ಬೆಳೆಯನ್ನು ಎಪಿಎಂಸಿ ಯಲ್ಲಿ ಕೇವಲ ಶೇ. 9 ರಷ್ಟು ಮಾರಾಟ ಪ್ರಕ್ರಿಯೆ ನಡೆದರೆ, ಖಾಸಗಿ ವಲಯದಲ್ಲಿ ಶೇ. 82 ರಷ್ಟು ಮಾರಾಟ ನಡೆದಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಬೆಳೆಗಳ ಉತ್ಪಾದನೆಗೆ ಬೇಕಾದ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಕೊಂಡು, ಹೆಚ್ಚು ಹೆಚ್ಚು ಉತ್ಪಾದನೆಗೆ ಆದ್ಯತೆ ನೀಡುತ್ತಿದ್ದೇವೆಯೇ ಹೊರತು, ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರಿಗೆ ಅನುಕೂಲವಾಗಬಹುದಾದ ನೀತಿ ಅಳವಡಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ.

ಬೆಳೆ ಬೆಳಯುವ ರೈತನಿಗೆ ಸಿಗಬೇಕಾದ ಲಾಭ ಮದ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸಲು ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಅಡಿಕೆ ಬೆಳೆ ಕೆಲವೆಡೆ ಬಂದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸರಿಯಾಗಿ ಬರುವುದಿಲ್ಲ. ಆದರೆ ಮಾಹಿತಿಯ ಕೊರತೆಯಿಂದ ಅದೇ ಬೆಳೆ ಬೆಳೆಯಲು ಮುಂದಾಗುವ ರೈತ ನಷ್ಟ ಅನುಭವಿಸುತ್ತಾನೆ. ಹೀಗಾಗಿ ಭೌಗೋಳಿಕತೆ ಹಾಗೂ ಹವಾಗುಣಕ್ಕೆ ಅನುಗುಣವಾಗಿ ರೈತರು ವಿವಿಧ ಬೆಳೆ ಪದ್ಧತಿಯನ್ನು ಅನುಸರಿಸಬೇಕು. ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆ 26000 ಹೆ. ನಷ್ಟು ವಿಸ್ತರಣೆಗೊಂಡಿದೆ. ಇದೇ ರೀತಿ ವಾಣಿಜ್ಯ ಬೆಳೆಗಳತ್ತ ರೈತ ಮುಖ ಮಾಡಿದಲ್ಲಿ, ಆಹಾರ ಆಧಾರಿತ ಬೆಳೆಗಳ ಕ್ಷೇತ್ರ ಕಡಿಮೆಯಾಗಿ, ಭವಿಷ್ಯದಲ್ಲಿ ಜನರು ಪೌಷ್ಠಿಕ ಆಹಾರದ ಕೊರತೆ ಎದುರಿಸಬೇಕಾಗುತ್ತದೆ.

ದೇಶದ ಆರ್ಥಿಕ ಅಭಿವೃದ್ಧಿಗೆ ಕೃಷಿ ಬಲವರ್ಧನೆಯಾಗುವುದು ಅತ್ಯಗತ್ಯವಾಗಿದೆ. ರೈತರಿಗೆ ನೂತನ ತಂತ್ರಜ್ಞಾನಗಳ ವರ್ಗಾವಣೆ ವ್ಯವಸ್ಥೆ ಸಮರ್ಪಕವಾಗಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕೃಷಿ ಸಂಶೋಧನಾ ಕೇಂದ್ರೆಗಳು, ಕೃಷಿ ವಿಜ್ಞಾನ ಕೇಂದ್ರಗಳಂತಹ ವ್ಯವಸ್ಥೆಯನ್ನು ಸಾಕಷ್ಟು ಬಲಗೊಳ್ಳಬೇಕಿದೆ. ಕೃಷಿ ವಿಶ್ವವಿದ್ಯಾಲಯಗಳು ಬಿಡುಗಡೆ ಮಾಡುವ ತಂತ್ರಜ್ಞಾನಗಳು, ನೀತಿಗಳ ಬಗ್ಗೆ ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸುವುದು ಇಂದಿನ ಅಗತ್ಯಗಳಲ್ಲಿ ಒಂದು ಎಂದು ಡಾ. ಕೆ.ಪಿ. ಬಸವರಾಜ ಅವರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಧರ ಅವರು ಮಾತನಾಡಿ, ಪ್ರಗತಿಪರ ರೈತರು, ಕೃಷಿ ಕ್ಷೇತ್ರದಲ್ಲಿ ಹೆಚ್ಚು ಪ್ರಶಸ್ತಿ ಪಡೆದಂತಹ ರೈತರಿಗೆ ಫಾರ್ಮರ್ ಪ್ರೊಫೆಸರ್ ಎಂದು ಗುರುತಿಸಿ, ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಅವಕಾಶ ಕಲ್ಪಿಸಲಾಗುವುದು. ರೈತರಿಗೆ ಕೃಷಿ, ತೋಟಗಾರಿಕೆ ಸೇರಿದಂತೆ ರೈತೋಪಯೋಗಿ ಕ್ಷೇತ್ರಗಳಲ್ಲಿ ಹೊಸ ಹೊಸ ತಂತ್ರಜ್ಞಾನ, ಮಾಹಿತಿ ಹಾಗೂ ಸಲಹೆಗಳನ್ನು ನೀಡಲು ಕೃಷಿ ವಿಜ್ಞಾನ ಕೇಂದ್ರ ಆದ್ಯತೆ ನೀಡುತ್ತಿದೆ. ಜಿಲ್ಲೆಯಲ್ಲಿ ಗೋಡಂಬಿ ಕೃಷಿಗೆ ವಿಫುಲ ಅವಕಾಶವಿದೆ, ಅಲ್ಲದೆ ಇದಕ್ಕೆ ಸಾಕಷ್ಟು ಬೇಡಿಕೆಯೂ ಇದೆ. ಸಿರಿಧಾನ್ಯ ಬೆಳೆಗಳಿಗಳೂ ಇದೀಗ ರೈತರಿಗೆ ಹೆಚ್ಚಿನ ಲಾಭ ನೀಡುತ್ತಿದ್ದು, ಸಿರಿಧಾನ್ಯ ತಳಿಗಳ ಅಭಿವೃದ್ಧಿಗೆ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿ, ಉತ್ತಮ ತಳಿ ಬೀಜಗಳನ್ನು ರೂಪಿಸಲು ಅವಕಾಶವಿದೆ. ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಇನ್ನು ಯಾವ ಬಗೆಯ ನೆರವು ದೊರಕಿಸಬಹುದು ಎಂಬುದರ ಬಗ್ಗೆ ತಜ್ಞರು, ರೈತರಿಂದ ಸಲಹೆಗಳನ್ನು ಪಡೆದು, ಅದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ 1.37 ಲಕ್ಷ ಹೆ. ನಷ್ಟು ಮೆಕ್ಕೆಜೋಳ ಬೆಳೆದಿದ್ದು, ಬೆಂಬಲ ಬೆಲೆಯಲ್ಲಿ ಇದನ್ನು ಖರೀದಿ ಮಾಡಲಾಗುತ್ತಿಲ್ಲ. ಮೆಕ್ಕೆಜೋಳ ಬೆಳೆಯ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿಸುವುದನ್ನು ಕಡ್ಡಾಯಗೊಳಿಸಲು, ಬೀಜ ವಿತರಣೆ ಸಂದರ್ಭದಲ್ಲಿಯೇ ಎರಡೂ ಬೆಳೆಗಳ ಬೀಜ ವಿತರಿಸಲು ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಆತ್ಮ ನಿರ್ಭರ್ ಯೋಜನೆಯಡಿ ಸಿರಿಧಾನ್ಯ ಬೆಳೆ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಗುರಿ ನಿಗದಿಪಡಿಸಿದ್ದು, ಪ್ರತಿ ಘಟಕದ ವೆಚ್ಚ 10 ಲಕ್ಷ ರೂ. ಇದೆ. ಇದರಲ್ಲಿ 4 ಲಕ್ಷ ರೂ. ಸಬ್ಸಿಡಿ, 4.5 ಲಕ್ಷ ರೂ. ಬ್ಯಾಂಕ್ ಸಾಲವಾದರೆ, 1.5 ಲಕ್ಷ ಘಟಕ ಸ್ಥಾಪಿಸಬಯಸುವವರು ವಂತಿಗೆ ಪಾವತಿಸಬೇಕು. ಇದೊಂದು ಉತ್ತಮ ಯೋಜನೆಯಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶ್ರತ್ ಅವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‍ಗಳು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಾಲ ನೀಡಿಕೆಯಲ್ಲಿ ಹಿಂದೇಟು ಹಾಕುತ್ತಾರೆ. ಗ್ರಾಮಗಳಲ್ಲಿ ನಡೆಯುವ ರೈತ ಜಾಗೃತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಆಯಾ ವ್ಯಾಪ್ತಿ ಬ್ಯಾಂಕ್ ಶಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡಲ್ಲಿ, ಈ ಸಮಸ್ಯೆಯನ್ನು ಪರಿಹರಿಸಬಹುದು. ಕೇವಲ ಕೃಷಿ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ಇದೀಗ ಹಾಲು ಉತ್ಪಾದಕರು, ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರದ ಫಲಾನುಭವಿಗಳಿಗೂ ನೀಡಲಾಗುತ್ತಿದೆ ಎಂದರು.

ದಾವಣಗರೆ ಕೃಷಿ ವಿಜ್ಞಾನ ಕೇಂದ್ರದ ಸಾಧನೆಗಳ ಕುರಿತು ಮಾಹಿತಿ ನೀಡಿದ ಡಾ. ದೇವರಾಜ್ ಟಿ.ಎನ್., ಅವರು ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಗೆ ಕೆವಿಕೆ ಸಾಕಷ್ಟು ನೆರವಾಗಿದೆ. ರೈತರು ಬೆಳೆದ ತರಕಾರಿ ಮಾರಾಟ ಮಾಡಲು ತೊಂದರೆ ಎದುರಿಸುತ್ತಿರುವಾಗ ದಿನಕ್ಕೆ ಸುಮಾರು 2 ಟನ್‍ಗಳಷ್ಟು ತರಕಾರಿಗಳನ್ನು ಮಾರಾಟ ಮಾಡಿಸಲು ಜಿಲ್ಲೆಯ ಸುಮಾರು 150 ಹಳ್ಳಿಗಳ ರೈತರಿಗೆ ನೆರವು ನೀಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ 05 ವೆಬಿನಾರ್‍ಗಳನ್ನು ಆಯೋಜಿಸಿದ್ದು ಸುಮಾರು 7 ಸಾವಿರ ರೈತರು ಪಾಲ್ಗೊಂಡಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಕೆವಿಕೆ ಕೈಗೊಂಡ ಕಾರ್ಯಗಳಿಗೆ ರಾಜ್ಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಸಿರಿಗೆರೆ ತರಳಬಾಳು ರೂರಲ್ ಡೆವಲಪ್‍ಮೆಂಟ್ ಫೌಂಡೇಶನ್ ಅಧ್ಯಕ್ಷರು ಹಾಗೂ ಐಸಿಎಆರ್ ತರಳಬಾಳು ಕೆವಿಕೆ ಅಧ್ಯಕ್ಷರಾದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಹಲವು ರೈತ ಸದಸ್ಯರು ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಆಗಬೇಕಿರುವ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದರು. ಕೃಷಿ ವಿವಿ. ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್.ಯು. ಪಾಟೀಲ್, ಕೆವಿಕೆ ತೋಟಗಾರಿಕೆ ವಿಷಯ ತಜ್ಞ ಬಸವನಗೌಡ, ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮೀಕಾಂತ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಹಾಲವರ್ತಿ ಮಹೇಶಪ್ಪ, ಯಶೋಧ ಮಲ್ಲೇಶ್, ಆಂಜನೇಯ ಸೇರಿದಂತೆ ಕೃಷಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರುಗಳು, ಭಾಗವಹಿಸಿದ್ದರು. ‘ರೈತರ ಆದಾಯ ದ್ವಿಗುಣಗೊಳಿಸಲು ತಂತ್ರಜ್ಞಾನಗಳು’ ಹಾಗೂ ‘ತರಳಬಾಳು ಕೃಷಿ ಸಿಂಚನ’ ಪ್ರಕಟಣೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top