ದಾವಣಗೆರೆ : ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಟಿ. ಆಂಜನಪ್ಪ ಅವರ ಬೆಂಗಳೂರು ಮತ್ತು ದಾವಣಗೆರೆ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಿನ್ನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ನಿವಾಸದಲ್ಲಿ 4 ಕೋಟಿಗೂ ಹೆಚ್ಚು ಮೌಲ್ಯದ ಬಂಗಾರ, ಬೆಳ್ಳಿ, ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಿಬಿಎಂಪಿ ಬೊಮ್ಮನಹಳ್ಳಿ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಜೀವನ ಭೀಮಾನಗರದಲ್ಲಿನ ವಾಸದ ಮನೆ, ಸ್ವಂತ ಊರಾದ ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದ ವಾಸದ ಮನೆ, ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿಯಲ್ಲಿರುವ ತೋಟದ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಶೋಧದ ಸಂದರ್ಭದಲ್ಲಿ 50 ಲಕ್ಷ ನಗದು ಹಣ, 1.2 ಕೆಜಿ ಚಿನ್ನ ಮತ್ತು 9 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಜಿನಪ್ಪ ಅವರಿಗೆ ಸೇರಿದ ಲೋಕಿಕೆರೆಯ ಮನೆಯಲ್ಲಿ ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 22 ಎಕರೆ ಅಡಿಕೆ ತೋಟ, 4ಐಷಾರಾಮಿ ಕಾರು, ಬೆಂಗಳೂರು ಮತ್ತು ಲೋಕಿಕೆರೆಯಲ್ಲಿ ಗ್ರಾಮದಲ್ಲಿ ಐಷಾರಮಿ ಮನೆಗಳು ಪತ್ತೆಯಾಗಿವೆ. ಅಲ್ಲದೇ, ಚನ್ನಗಿರಿ ತಾಲೂಕಿನಲ್ಲಿರುವ ಅವರ ಪತ್ನಿಯ ಮನೆಯಲ್ಲಿಯೂ ದಾಳಿ ನಡೆಸಲಾಗಿತ್ತು. ಈ ಎಲ್ಲಾ ಆಸ್ತಿಯ ಮೌಲ್ಯ 10 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.