ದಾವಣಗೆರೆ: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ 25 ಸರ್ಕಾರಿ ನೌಕರರನ್ನು ಪತ್ತೆಹಚ್ಚಲಾಗಿದೆ. ಜಿಲ್ಲೆಯಲ್ಲಿ 2891 ಕಾರ್ಡ್ ರದ್ದುಪಡಿಸಿದ್ದು, 3.21 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಮಾತನಾಡಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚಿ ಕ್ರಮ ಜರುಗಿಸಲು ಇಲಾಖೆ ಆಂದೋಲನ ಪ್ರಾರಂಭಿಸಿದೆ. ಪ್ರತಿದಿನ ಕನಿಷ್ಟ 5 ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಬೇಕು, ಕನಿಷ್ಟ 10 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಹಚ್ಚುವಂತೆ ಜಿಲ್ಲೆಯ ಎಲ್ಲ ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರಿಗೆ ಗುರಿ ನಿಗದಿಪಡಿಸಲಾಗಿದೆ ಎಂದರು.
ಸರ್ಕಾರಿ ನೌಕರರಾಗಿದ್ದು, ತಮ್ಮ ಪತ್ನಿ ಅಥವಾ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಹೆಚ್‍ಆರ್‍ಎಂಎಸ್ ದತ್ತಾಂಶದಿಂದ ಮಾಹಿತಿ ಪಡೆದು, ಅಕ್ರಮ ಕಾರ್ಡ್ ರದ್ದುಪಡಿಸಿ, ನೌಕರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು. ಜಿ.ಪಂ. ಅಧ್ಯಕ್ಷೆ ಮಾತನಾಡಿ, ಎಲ್ಲ ನ್ಯಾಯಬೆಲೆ ಅಂಗಡಿಗಳು ನಿಗದಿತ ದಿನಾಂಕ ಹಾಗೂ ಸಮಯಗಳಲ್ಲಿ ತೆರೆದಿರಬೇಕು, ಈ ಕುರಿತ ಬೋರ್ಡ್ ಅನ್ನು ಅಂಗಡಿಯಲ್ಲಿ ಅಳವಡಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಬಹುತೇಕ ಹೋಟೆಲ್‍ಗಳು ಪಡಿತರ ಅಕ್ಕಿ ಆಧಾರದಿಂದಲೇ ನಡೆಯುತ್ತಿವೆ, ಬಿಪಿಎಲ್ ಕಾರ್ಡ್ ಕೊಡುವಾಗ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಸಮರ್ಪಕವಾಗಿ ಪರಿಶೀಲಿಸಿಯೇ ನೀಡಬೇಕು, ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದುಪಡಿಸಿ, ದಂಡ ವಸೂಲಿ ಮಾಡಬೇಕು ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಆಗ್ರಹಿಸಿದರು.