ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ರೆಮನ್ ಚಂಡಮಾರುತ ಪರಿಣಾಮ ಭಾರೀ ಬಿರುಗಾಳಿ ಉಂಟಾಗಿದ್ದು, ಭಾನುವಾರ ರಾತ್ರಿಯಿಂದ. ಇನ್ನಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಈ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ. 6ಸೆ. ಮೀಟರ್‌ನಿಂದ 11 ಸೆ. ಮೀಟರ್ ವರಗೆ ಮಳೆ ಆಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ಜೂನ್ 3ರವರೆಗೆ ಹಾಗೂ ಜೂನ್ 3ರಿಂದ ಜೂನ್ 11ರವರೆಗೆ ಭಾರೀ ಮಳೆಯಾಗಲಿದೆ. ಎರಡನೇ ಹಂತದಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಕೊಡಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಜೂನ್ 03ರವರೆಗೆ ರಾಜ್ಯದಲ್ಲಿ ರೆಮನ್ ಚೆಂಡಮಾರುತದ ಪ್ರಭಾದಿಂದ ಭಾರೀ ಮಳೆ ಆಗಲಿದೆ. ಚಂಡಮಾರುತದ ಗಾಳಿಯ ವೇಗ ಪ್ರತಿ ಗಂಟೆಗೆ 135 ಕಿಮೀ ವೇಗದಲ್ಲಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮೊದಲು ದಕ್ಷಿಣ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ, ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ನಿರೀಕ್ಷಿಸಬಹುದಾಗಿದೆ. ಉಳಿದಂತೆ ಮಲೆನಾಡು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಬಹುದು. ಕೆಲವೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತದೆ.
ಇನ್ನೂ ಜೂನ್ 03ರಿಂದ ಜೂನ್ 11ರವರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಧಿಕ ಮಳೆ ಆಗಬಹುದು. ಅಷ್ಟೊತ್ತಿಗಾಗಲೇ ಕರ್ನಾಟಕ ಸೇರಿದಂತೆ ದೇಶದಲ್ಲಿ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಜೊತೆಗೆ ಚಂಡಮಾರುತದ ಹಾವಳಿ ತಗ್ಗದಿದ್ದರೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಹಲವೆಡೆ ಮಳೆ ಆಗಿದೆ. ಇನ್ನೂ ಕೆಲವೆಡೆ ಉತ್ತಮ ಮಳೆಗಾಗಿ ಕಾಯುತ್ತಿದ್ದು, ರೈತರು ಮುಂಗಾರು ಹಂಗಾಮು ಬಿತ್ತನೆ ಸಜ್ಜಾಗಿದ್ದಾರೆ.