ಬೆಂಗಳೂರು : ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಕರ್ಫ್ಯೂ ಸಂದರ್ಭದಲ್ಲಿ ವಿನಾಕಾರಣ ಹೊರಗೆ ಓಡಾಡುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಉದ್ದೇಶಪೂರ್ವಕವಾಗಿ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡುವ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿ 9 ಗಂಟೆಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಇರಲಿದ್ದು, ಈ ವೇಳೆ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡರೆ ಕೊರೊನಾ ನಿಯಂತ್ರಿಸಲು ಸಾಧ್ಯ. ಕೊರೊನಾ ಕರ್ಫ್ಯೂಗೆ ಜನರ ಸಂಪೂರ್ಣ ಸಹಕಾರ ಬೇಕು. ಸರ್ಕಾರ ಕೈಗೊಂಡಿರುವ ಈ ಬಿಗಿ ಕ್ರಮಗಳನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ರಾಜ್ಯದ ಜನರ ಮೇಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಬಿಗಿ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈ 14 ದಿನಗಳ ಕಾಲ ಪ್ರತಿಯೊಬ್ಬರು ಜಾಗೃತರಾಗಿರಬೇಕು. ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ . ನಿರ್ಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಬಹಳ ಅವಶ್ಯವಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕರ್ಫ್ಯೂ ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.