ಬೆಂಗಳೂರು: ದಾವಣಗೆರೆ ಮೂಲದ ವ್ಯಕ್ತಿಯೊಬ್ಬರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಸೇರಿ, ನಾಲ್ವರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಇನ್ಸ್ಪೆಕ್ಟರ್ ಎ.ವಿ. ವೆಂಕಟೇಶ್ ಮೂರ್ತಿ ಅವರು ದೂರು ನೀಡಿದ್ದರು. ದಾವಣಗೆರೆ ನಿವಾಸಿ ಡಿ.ಎಂ. ವಾಗೀಶ್ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಪ್ರಮಾಣ ಪತ್ರ ಪಡೆಯಲು ಸಹಕರಿಸಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಾಗೀಶ್, ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದರು. ವೀರಶೈವ ಲಿಂಗಾಯತ ಜಾತಿಗೆ ಸೇರಿದ್ದ ವಾಗೀಶ್, ಬೇಡ ಜಂಗಮ ಜಾತಿ ಹೆಸರಿನಲ್ಲಿ 2021ರ ಜುಲೈ 6ರಂದು ಪರಿಶಿಷ್ಟ ಜಾತಿ (ಎಸ್.ಸಿ) ಪ್ರಮಾಣ ಪತ್ರ ಪಡೆದಿದ್ದರು. ಜಾತಿ ಪರಿಶೀಲನೆ ಸಮಿತಿ ಹಾಗೂ ಜಿಲ್ಲಾಧಿಕಾರಿ ತನಿಖೆ ನಡೆಸಿತ್ತು.
ನಕಲಿ ಜಾತಿ ಪ್ರಮಾಣ ಪತ್ರ ಎಂದು ಗೊತ್ತಾದ ತಕ್ಷಣ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಇನ್ಸ್ಪೆಕ್ಟರ್ ಎ.ವಿ. ವೆಂಕಟೇಶ್ ಮೂರ್ತಿ ಅವರು ದೂರು ನೀಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಇನ್ಸ್ಪೆಕ್ಟರ್ ದೂರು ನೀಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.



