ಬೆಂಗಳೂರು: ನಕಲಿ ನೋಟ್ ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಏಳು ಮಂದಿಯ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಲಾಗಿದೆ. ಇವರಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಗ್ಯಾಂಗ್ ಬ್ಯಾನ್ ಆಗಿರುವ ಒಂದು ಸಾವಿರ ರೂ. ಮುಖಬೆಲೆಯ ನೋಟು ಜೆರಾಕ್ಸ್ ಮಾಡಿ ವಂಚನೆ ಯತ್ನ ಮಾಡುತ್ತಿತ್ತು, ಇದಲ್ಲದೆ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸಲು ಸಂಚು ನಡೆಸಿ, ಬ್ಯಾನ್ ಆಗಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಮೋಸ ಮಾಡುತ್ತಿದ್ದರು. ದಾಳಿ ವೇಳೆ 75 ಲಕ್ಷ ನಿಷೇಧಿತ ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ 1 ಸಾವಿರ ಹಾಗೂ 500 ಮುಖಬೆಲೆಯ 70 ಲಕ್ಷ ನಿಷೇಧಿತ ನೋಟುಗಳು ವಶವಾಗಿವೆ. ಬಳಿಕ ಆರೋಪಿಗಳ ವಿಚಾರಣೆ ನಡೆಸಿದಾಗ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಕಾಸರಗೋಡಿನಲ್ಲಿ ಬಾಕಿ ಹಣ ಇದೆ ಎಂದು ಆರೋಪಿಗಳು ಹೇಳಿದ್ದಾರೆ. ಕಾಸರಗೋಡಿಗೆ ಹೋದಾಗ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿರುವುದಲ್ಲದೆ 16 ಮೂಟೆ ಪೇಪರ್ ಗಳು ಪೊಲೀಸರ ವಶವಾಗಿವೆ. ಗೋವಿಂದಪುರ ಪೊಲೀಸರಿಂದ ಮಂಜುನಾಥ್, ದಯಾನಂದ ಸೇರಿ 7 ಆರೋಪಿಗಳ ಬಂಧನ ನಡೆದಿದೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.