ಕೊಡಗು : ತನ್ನ ಹಳೇಯ ಸ್ನೇಹಿತೆಯರೊಂದಿಗೆ ಮುಂಬೈನಿಂದ ಕೊಡಗಿಗೆ ಪ್ರವಾಸ ಬಂದಿದ್ದ ಯುವತಿ ಮಡಿಕೇರಿಯ ಹೋಂಸ್ಟೇನಲ್ಲಿ ತಂಗಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಮುಂಬೈ ಮೂಲದ ಈಶ್ವರ್ ಎಂಬುವರ ಮಗಳು ವಿಘ್ನೇಶ್ವರಿ (24) ಮೃತ ಯುವತಿ. ಮುಂಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು.
ವಿಘ್ನೇಶ್ವರಿ ತನ್ನ ಹಳೆಯ ಸ್ನೇಹಿತೆಯರೊಂದಿಗೆ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದಳು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಯುವತಿ ವಿಘ್ನೇಶ್ವರಿ ಬಾತ್ ರೂಮಿನಲ್ಲಿ ಮೃತಪಟ್ಟಿದ್ದಾಳೆ. ಸ್ನಾನಕ್ಕೆಂದು ತೆರಳಿದ್ದ ಯುವತಿ ಬಾತ್ ರೂಮಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಯುವತಿ ಸಾವಿನ ಸುದ್ದಿ ಗೊತ್ತಾದ ತಕ್ಷಣ ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಬಂದಿದ್ದಾನೆ. ಅಷ್ಟರಲ್ಲಿ ಯುವತಿ ಮೃತಪಟ್ಟಿರೋದು ಗೊತ್ತಾಗಿದೆ. ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.