ದಾವಣಗೆರೆ: ನಿನ್ನೆ ರಾತ್ರಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದ ಗಣಿ-ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಬರ್ಬರ ಹತ್ಯೆ ನಡೆದಿದೆ. ಈ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದೀಗ ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹತ್ಯೆಯ ಬಗ್ಗೆ ಮಹತ್ವ ಮಾಹಿತಿ ನೀಡಿದ್ದು, ಪ್ರತಿಮಾ ಅವರ ಕೌಟಂಬಿಕ ಸಮಸ್ಯೆ ಕಾರಣ ಎನ್ನಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಯಾವ ಸಮಸ್ಯೆ ಇರಲಿಲ್ಲ. ಹತ್ಯೆಗೆ ಕಾರಣ ಏನು ಎಂಬುದು ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ ಎಂದಿದ್ದಾರೆ.
ತೀರ್ಥಹಳ್ಳಿಯ ಮೂಲದವರಾದ ಪ್ರತಿಮಾ ಅವರಿಗೆ ಮಗು ಇದೆ ಎಂಬ ಮಾಹಿತಿ ಇದೆ. ಹತ್ಯೆಗೆ ನಿಖರ ಮಾಹಿತಿ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಿದ್ದಕ್ಕೆ ಈ ಹತ್ಯೆ ನಡೆತ್ತಾ..? ಅಥವಾ ಕೌಟುಂಬಿಕ ಕಾರಣನಾ ಎಂಬುದನ್ನು ಈಗಲೇ ಹೇಳಲಾಗದು.ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದ್ರೆ ಕಠಿಣ ಕ್ರಮ ಖಚಿತ. ಅಧಿಕಾರಿ ಪ್ರತಿಮಾ ಅವರ ಕಾರು ಚಾಲಕ ಸಂಪರ್ಕದಲ್ಲಿದ್ದ. ಅವರೊಂದಿಗೆ ಬೇರೆ ಯಾರ್ಯಾರು ಸಂಪರ್ಕದಲ್ಲಿದ್ದರು ಎಂಬುದರ ಕುರಿತು ತನಿಖೆ ನಡೆಯಲಿದೆ ಎಂದು ತಿಳಿಸಿದರು.
ನಿನ್ನೆ (ನ.4) ರಾತ್ರಿ ಘಟನೆ ನಡೆದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಚಾಲಕ ಕಚೇರಿಯಿಂದ ಮನೆಗೆ ಬಿಟ್ಟು ಬಂದಿದ್ದ. ಇಂದು ಬೆಳಿಗ್ಗೆ ಪ್ರತಿಮಾ ಅವರ ಅಣ್ಣ ಕರೆ ಮಾಡಿದಾಗ ಸ್ವೀಕರಿಸಿಲ್ಲ ಎನ್ನಲಾಗಿದೆ. ಬೆಳಿಗ್ಗೆ ಮನೆ ಬಳಿ ಹೋಗಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಉದ್ದೇಶಪೂರ್ವಕ ಕೊಲೆ ನಡೆದಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



