ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಹೆಚ್ಚಳ ಹಿನ್ನಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಯ ಅಧಿಕಾರಿಗಳು, ನೌಕರರು ಹೊರತು ಪಡಿಸಿ ಉಳಿದ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಶೇ.50ರಷ್ಟು ನೌಕರರು ರೊಟೇಷನ್ ಆಧಾರದ ಮೇಲೆ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಹರಡದಂತೆ ತಡೆಯಲು ಸರ್ಕಾರ ಮುಂಜಾಗೃತಿ ಕೈಗೊಂಡಿದೆ. ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾದ ಕಾರಣ, ಸಚಿವಾಲಯದಲ್ಲಿ ಅಗತ್ಯಸೇವೆ ಹೊರತುಪಡಿಸಿ, ಇನ್ನುಳಿದ ಗ್ರೂಪ್-ಎ ವೃಂದದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜೊತೆಗೆ ಗ್ರೂಪ್ ಬಿ, ಸಿ, ಡಿ ವೃಂದದ ಅಧಿಕಾರಿ, ಸಿಬ್ಬಂದಿಗಳು ಶೇ.50ರಂತೆ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.
ಕೋವಿಡ್ ಕರ್ತವ್ಯಕ್ಕಾಗಿ ನಿಯೋಜಿಸಿದ್ದ ಅಧಿಕಾರಿ, ನೌಕರರು ತಪ್ಪದೇ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದೆ.ಇನ್ನೂ ದೃಷ್ಠಿ ಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ, ಸಿಬ್ಬಂದಿಗಳು ಮತ್ತು ಗರ್ಭಿಣಿ ಮಹಿಳಾ ಉದ್ಯೋಗಿಗಳಿಗೆ ಕಚೇರಿ ಹಾಜರಾತಿಯಿಂದ ವಿನಾಯ್ತಿ ನೀಡಲಾಗಿದೆ. ಈ ಆದೇಶ ಜನವರಿ 18 ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.



