ಬೆಂಗಳೂರು: 200 ಯುನಿಟ್ ವಿದ್ಯುತ್ ಫ್ರೀ, ಮನೆಯ ಒಡತಿಗೆ 2 ಸಾವಿರ, ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ಸಹಿತ 5 ಗ್ಯಾರಂಟಿಗಳ ಬಗ್ಗೆ ನಾವು ವಾಗ್ದಾನ ನೀಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆವ ಸರ್ಕಾರ. ಸಂಪುಟ ಸಭೆಯಲ್ಲಿ ಎಲ್ಲಾ ಭರವಸೆ ಈಡೇರುಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೂತನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ನಂತರ ಡಿಸಿಎಂ ಡಿಕೆ ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಣಾಳಿಕೆಯಲ್ಲಿ ನಾವು ಹಲವು ಭರವಸೆಗಳನ್ನು ಘೋಷಿಸಿದ್ದೇವೆ. 200 ಯುನಿಟ್ ವಿದ್ಯುತ್ ಫ್ರೀ, ಮನೆಯ ಒಡತಿಗೆ 2 ಸಾವಿರ, ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ, ನಿರುದ್ಯೋಗ ಯುವಕರಿಗೆ 3 ಸಾವಿರ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 1,500 ಹಾಗೂ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ನೀಡಲು ತೀರ್ಮಾನಿಸಿದ್ದೇವೆ ಎಂದರು.
5 ಗ್ಯಾರಂಟಿಗಳ ಬಗ್ಗೆ ವಾಗ್ದಾನ ನೀಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆವ ಸರ್ಕಾರ. ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯವಾದ ಮಾರ್ಗಸೂಚಿ ಮಾಹಿತಿ ಸಂಗ್ರಹಿಸುವಂತೆ ಸಹ ಸೂಚಿಸಲಾಗಿದೆ ಎಂದರು.
ಈ ಎಲ್ಲಾ ಯೋಜನೆಗೆ ಸುಮಾರು 50 ಸಾವಿರ ಕೋಟಿ ಹಣ ಬೇಕು. ನಮ್ಮ ರಾಜ್ಯದ ಬಜೆಟ್ 3 ಲಕ್ಷದ 10 ಸಾವಿರ ಕೋಟಿ ಆಗಿದೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೂ ನಮಗೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕೇಂದ್ರದಿಂದ ಅನ್ಯಾಯವಾಗಿದೆ. ರಾಜ್ಯಕ್ಕೆ ಕೊಡಬೇಕಿದ್ದ ಸಹಾಯಧನ ಕೊಟ್ಟಿಲ್ಲ. 5495 ಕೋಟಿ ಹಣ ಕೇಂದ್ರದಿಂದ ಬರಬೇಕಿದೆ ಎಂದರು.
ಜಿ ಎಸ್ ಟಿ ಮೂಲಕ ಹೆಚ್ಚು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೂ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಬಿಜೆಪಿ 25 ಸಂಸದರು ಕೇಂದ್ರದ ಬಳಿ ಜಿ ಎಸ್ ಟಿ ಹಣ ಕೇಳಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಜಿ ಎಸ್ ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಆದರೂ ಈ ಬಗ್ಗೆ ಕೇಳಿಲ್ಲ ಕಟ್ಟುನಿಟ್ಟಾಗಿ ಆದಾಯ ತೆರಿಗೆ ವಸೂಲಿ ಮಾಡಿದರೆ ರಾಜ್ಯದ ಆದಾಯ ಹೆಚ್ಚಳವಾಗುತ್ತದೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಗ ಕೇವಲ 53 ಲಕ್ಷ ಕೋಟಿ ಸಾಲ ಇತ್ತು. ಈಗ 155 ಲಕ್ಷ ಕೋಟಿ ಸಾಲವಾಗಿದೆ. ದೇಶವನ್ನು ಕೇಂದ್ರ ಸರ್ಕಾರ ಸಾಲಕ್ಕೆ ದೂಡಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆರ್ಥಿಕವಾಗಿ ದಿವಾಳಿಯಾಗದಂತೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ಮೊದಲ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತಕ್ಜೆ 1200 ಕೋಟಿ ರೂಪಾಯಿ ತಿಂಗಳ ವೆಚ್ಚವಾಗಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂಪಾಯಿ, ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ ವಿತರಿಸಲಾಗುವುದು. ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ. ಇದು ಕರ್ನಾಟಕ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.ಈ ವರ್ಷದಿಂದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.