ಜಿಲ್ಲಾ ಸುದ್ದಿ
ಚಿತ್ರದುರ್ಗ ಜಿಲ್ಲಾ ನೀರಾವರಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಿಲ್ಲ: ಸಮಿತಿ ಸಂಚಾಲಕರ ಅಭಿಪ್ರಾಯ
ಚಿತ್ರದುರ್ಗ: ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಭೆ ಕರೆಯುವ ಅಧಿಕಾರ ಸಮಿತಿ ಸಂಚಾಲಕರಿಗೆ ಸೇರಿದ್ದು, ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ ಎಂದು ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆ ಸೇರಿದಂತೆ ನೂರಾರು ಸಂಘಟನೆಗಳು ಸಮಿತಿ ಹೋರಾಟದಲ್ಲಿ ಪಾಲ್ಗೊಂಡಿವೆ. ಹಾಗೇಂದು ಸಮಿತಿ ಹೆಸರಲ್ಲಿ ಸಭೆ ಕರೆಯುವ, ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರ ಸದಸ್ಯ ಸಂಘಟನೆಗಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರವಾಸಿ ಮಂದಿರದಲ್ಲಿ ರೈತಸಂಘ ಆಯೋಜಿಸಿದ ಸಭೆಗೆ ಸಮಿತಿ ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾರ್ಶ ಆಗಮಿಸಿರಲಿಲ್ಲ. ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಟಿ.ಶಿವಪ್ರಕಾಶ್, ಕೆ.ಆರ್ ದಯಾನಂದ್, ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು.ಅಷ್ಟೇ ಅಲ್ಲದೆ ಇಡೀ ಸಮಿತಿ ಹಾದಿಯಲ್ಲಿ ಈವರೆಗೂ ಪದಗ್ರಹಣ ಎಂಬ ಪದ ಬಳಕೆಯಿಲ್ಲ. ಆದರೆ, ಭಾನುವಾರ ಚಿತ್ರದುರ್ಗದ ಎಪಿಎಂಸಿ ಆವರಣದ ರೈತ ಭವನದಲ್ಲಿ ನಡೆದ ಸಭೆಗೆ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್ ಸಹ ಆಗಮಿಸಿರಲಿಲ್ಲ. ಆದರೆ, ಮಾಧ್ಯಮಗಳಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು ಎಂದು ಸುದ್ದಿಗಳು ಬಿತ್ತರವಾಗಿವೆ. ಈ ಎಲ್ಲ ನಡೆ ಬಗ್ಗೆ ಸಂಚಾಲಕ ಸಮಿತಿಗೆ ಅಸಮಾಧಾನವಿದೆ ಎಂದು ತಿಳಿಸಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ನಾನು ಕೂಡ ಅಂದಿನ ಸಭೆಗೆ ಹೋಗಿದ್ದೇ, ಆದರೆ, ಈಗ ನನಗೆ ಮನವರಿಕೆ ಆಗಿದ್ದು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಆಯ್ಕೆ ಪ್ರಕ್ರಿಯೆ ಆಗಬೇಕು ಎಂಬುದು ಸ್ಪಷ್ಟಗೊಂಡಿದೆ. ಸಮಿತಿಯಲ್ಲಿ ಒಡಕು ಇಲ್ಲ, ಆದರೆ, ಕೆಲ ಸಣ್ಣಪುಟ್ಟ ತಪ್ಪುಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಂಡು ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಬಯಲುಸೀಮೆಯ ಕಟ್ಟ ಕಡೆಯ ಜನರಿಗೆ ನೀರು ತಲುಪುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುವುದು ಎಂದರು.
ಸಂಚಾಲಕ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಹಿಂದಿನಿಂದಲೂ ಸಮಿತಿ ಸಂಚಾಲಕರ ಸಭೆಯಲ್ಲಿ ಚರ್ಚೆ ಬಳಿಕ, ಜನರನ್ನಳಗೊಂಡ ಸಭೆ ಕರೆದು ಅನುಮತಿ ಪಡೆಯುವ ಪದ್ಧತಿ ಹೋರಾಟ ಸಮಿತಿಯಲ್ಲಿದೆ. ಅದೇ ರೀತಿ ಮುಂದೆಯೂ ನಡೆಯಲಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೋಂದಾಯಿತ ಸಂಘಟನೆಯಲ್ಲ. ಆದರೂ ಈ ಸಮಿತಿ ಕೆಲ ಪದ್ಧತಿಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂಬ ಬಲವಾದ ನಂಬಿಕೆ ಜನರ ಮನದಲ್ಲಿ ಬೇರೂರಿದ್ದ ಸಂದರ್ಭ ಕವಿ ಬಂಜಿಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಜಿಲ್ಲೆಯ ಪತ್ರಕರ್ತರ ತಂಡ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಅಧ್ಯಯನ ನಡೆಸಿ ಯೋಜನೆ ಸಾಧ್ಯವಿದೆ ಎಂದು ಮೊದಲು ಮನವರಿಕೆ ಮಾಡಿಕೊಳ್ಳಲಾಯಿತು. ಬಳಿಕ ಮುಕ್ತ ವಿಚಾರ ವೇದಿಕೆ ನೇತೃತ್ವದಲ್ಲಿ ಹಲವು ಸಭೆ, ಚಿಂತನೆಗಳ ಬಳಿಕ ಬಹಿರಂಗವಾಗಿ ಗುರುಭವನದಲ್ಲಿ ಸಾರ್ವನಿಕರು, ಸಂಘ-ಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆಯಲಾಯಿತು. ಅಲ್ಲಿ ಹೋರಾಟ ಸಮಿತಿ ರೂಪ ಪಡೆಯಿತು ಸಭೆಯಲ್ಲಿ ರಾಜ್ಯಸಭಾ ಹಿರಿಯ ಸದಸ್ಯ ಹೆಚ್.ಹನುಮಂತಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ವೇಳೆ ವಿವಿಧ ಆತಿಯು ಸಮಿತಿ ರಚಿಸಲಾಯಿತು.
ಮುಖ್ಯವಾಗಿ ಸಂಚಾಲಕರ ಸಮಿತಿಯೇ ಎಲ್ಲ ರೀತಿಯ ಚರ್ಚೆ ನಡೆಸಿ, ಆ ವಿಚಾರವನ್ನು ಜನರ ಮುಂದಿಟ್ಟು ಅನುಮತಿ ಅಥವಾ ಜನರು ತಿರಸ್ಕರಿಸಿದರೆ ಆ ವಿಷಯವನ್ನು ಕೈಬಿಡುವ ಪದ್ಧತಿ ಈ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದೆ. ಹೆಚ್.ಹನುಮಂತಪ್ಪ ಅವರ ಬಳಿಕ ಪಿ.ಕೋದಂಡರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಬಸವ ಮಂಟಪದಲ್ಲಿ ಜರುಗಿದ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಜನರ ಸಭೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.
ಈ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ, ಬೃಹತ್ ಹೋರಾಟಗಳು, ರಸ್ತೆ ತಡೆ, ಸಮಾವೇಶ ಜರುಗಿದ. ಹೋರಾಟದ ಫಲ ಸರ್ಕಾರ ಯೋಜನೆ ಜಾರಿಗೆ ಅನುಮತಿ ನೀಡಿತು. ಬಳಿಕ ಎಲ್ಲ ಸರ್ಕಾರಗಳು ಒಂದಲ್ಲ ಒಂದು ರೀತಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರಿವೆ. ಆದರೆ, ನಿಧಾನಗತಿಯಲ್ಲಿ ಆಗುತ್ತಿದೆ ಎಂಬ ಅಸಮಾಧಾನ ಹೋರಾಟ ಸಮಿತಿ ಮತ್ತು ಜಿಲ್ಲೆಯ ಜನರ ಮನದಲ್ಲಿದೆ.
ಜಿಲ್ಲೆಯ ಕೆರೆಗಳ ಹೂಳೂ ತೆಗೆಸುವ, ಅಚ್ಚುಕಟ್ಟು ಮಾಡುವ ಹಾಗೂ ಮೊದಲ ಹಂತದ ಕಾಮಗಾರಿ ಆರಂಭಕ್ಕೆ ಒತ್ತಡ, ಪರಿಸರ ಇಲಾಖೆ ಅನುಮತಿ ಸೇರಿ ವಿವಿಧ ವಿಷಯಗಳ ಕುರಿತು ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತೀವ್ರ ಚರ್ಚೆ ನಡೆಸಿ, ಹೋರಾಟ ರೂಪಿಸುವ ಹಾದಿಯಲ್ಲಿದ್ದರು. ಆದರೆ, ದುರಾದುಷ್ಟವಾಶತ್ ನಮ್ಮ ಸಮಿತಿ ಅಧ್ಯಕ್ಷರಾದ ಎಂ.ಜಯಣ್ಣ, ಕಾರ್ಯಾಧ್ಯಕ್ಷರಾದ ಮುರುಘ ರಾಜೇಂದ್ರ ಒಡೆಯರ್ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಮ್ಮನ್ನು ಅಗಲಿದ್ದು ಹೋರಾಟಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸುವ ಚರ್ಚೆ ನನೆಗುದಿಗೆ ಬಿದ್ದಿತು.
ಈಗ ಚಾಲನೆ ನೀಡುವ ಸಂಬಂಧ ಚರ್ಚೆ ನಡೆಯುತ್ತಿರುವಾಗಲೇ ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳು ನಾವು ಎಂದು ಹೇಳಿಕೊಂಡು ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮಾಧ್ಯಮಗಳ ಮುಂದೆ ಬರಬೇಕಾಗಿದೆ. ನೀರಾವರಿ ಹೋರಾಟ ಸಮಿತಿ ಯಾವುದೇ ತೀರ್ಮಾನಗಳನ್ನು ಏಕಾಏಕಿ ತೆಗೆದುಕೊಳ್ಳುವುದಿಲ್ಲ. ಮೊದಲಿಗೆ ಸಂಚಾಲಕರ ಸಮಿತಿ ಸಭೆಯಲ್ಲಿ ಈ ಕುರಿತು ವಿಷಯದ ಗಂಭೀರತೆ ಆಧರಿಸಿ ಸಭೆಗಳನ್ನು ನಡೆಸಲಾಗುತ್ತದೆ.
ಅಲ್ಲಿ ಅಂತಿಮ ತೀರ್ಮಾನಕ್ಕೆ ಬಂದ ಬಳಿಕ ಪತ್ರಿಕೆಗಳ ಮೂಲಕ ಜಿಲ್ಲೆಯ ಜನರನ್ನೊಳಗೊಂಡ ಸಭೆ ಕರೆಯಲಾಗುತ್ತದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. ಸಭೆಯಲ್ಲಿ ಪಾಲ್ಗೊಂಡ ಜನರ ಅಭಿಪ್ರಾಯದಂತೆ ಪದಾಧಿಕಾರಿಗಳ ಆಯ್ಕೆ, ಹೋರಾಟದ ರೂಪುರೇಷೆ ಸಿದ್ಧಗೊಂಡು, ಅದನ್ನು ಅನುಷ್ಟಾನಕ್ಕೆ ತರಲಾಗುತ್ತದೆ.
ಆದರೆ, ರೈತಸಂಘದ ಒಂದು ಬಣ ಸೇರಿದಂತೆ ಯಾವುದೇ ಸಂಘಟನೆಗಳಿಗೆ ನೀರಾವರಿ ಹೋರಾಟ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಹಾಗೂ ಸಭೆ ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ಹೊಂದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
ದಲಿತ ನಾಯಕ, ಸಮಿತಿ ಅಧ್ಯಕ್ಷ ಎಂ.ಜಯಣ್ಣ, ಅಹಿಂದ-ನಾಯಕ, ಸಮಿತಿ ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯ. ಅವರಿಗೆ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವ ಸೂಚಿಸಿಲ್ಲ. ಈಗಲೇ ಕೆಲವರು ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳ ಹೆಸರಲ್ಲಿ ಸಭೆ ಕರೆದು ಆಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಗೊಂದಲ ಹುಟ್ಟುಹಾಕಲಾಗುತ್ತಿದೆ. ಇದು ಅವರಿಗೆ ಸರಿಯಾದ ಮಾಹಿತಿ ಕೊರತೆ ಇಲ್ಲದ ಕಾರಣಕ್ಕೆ ಮಾಡಿದ್ದಾರೆ ಎಂದು ಭಾವಿಸಿದ್ದೇವೆ. ಅದನ್ನು ನಾವುಗಳು ಗಂಭೀರವಾಗಿ ಪರಿಗಣಿಸದೇ ಕ್ಷಮಾಗುಣದಿಂದ ಅವರ ಸಮಂಜಸವಲ್ಲದ ಕಾರ್ಯವನ್ನು ಖಂಡಿಸುತ್ತೇವೆ.
ಸಮಿತಿ ಕಾರ್ಯಚಟುವಟಿಕೆ, ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಈ ಮೊದಲಿನಂತೆಯೇ ಸಂಚಾಲಕರ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ, ಪತ್ರಿಕಾ ಹೇಳಿಕೆ ನೀಡಿ ಜಿಲ್ಲೆಯ ಮಠಾಧೀಶರು, ಎಲ್ಲ ರಾಜಕೀಯ ಪಕ್ಷಗಳು ಹಾಗೂ ರೈತ, ಕಾರ್ಮಿಕ ಸೇರಿದಂತೆ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಆಸಕ್ತ ಎಲ್ಲರನ್ನೊಳಗೊಂಡು ಸಭೆ ಕರೆಯಲಾಗುತ್ತದೆ. ಆ ಸಭೆಯಲ್ಲಿ ಜನರು ಅಭಿಪ್ರಾಯವೇ ಅಂತಿಮವಾಗಿರುತ್ತದೆ. ಇಲ್ಲಿ ಸಂಚಾಲಕರ ಸಮಿತಿ ಎಂಬುದು ಸಭೆ ಆಯೋಜಿಸುವುದು, ಹೋರಾಟಕ್ಕೆ ಒಂದು ರೂಪ ಕೊಡುವ ಕೆಲಸವನ್ನೇ ಮಾಡುತ್ತದೆ.
ನೀರಾವರಿ ಹೋರಾಟಕ್ಕೆ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ, ಸಾಣೇಹಳ್ಳಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಭೋವಿ ಮಠದ ಗುರುಗಳು, ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹೀಗೆ ಬಹಳಷ್ಟು ಮಠಾಧೀಶರು ಬೆಂಬಲವಾಗಿ ನಿಂತಿದ್ದಾರೆ. ಸಮಿತಿ ಆಯೋಜಿಸುವ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಜೋಳಿಗೆ ಹಿಡಿದು ವಿಧಾನಸೌಧಕ್ಕೆ ನೀರಿನ ಭೀಕ್ಷೆ ಬೇಡಲು ಸಮಿತಿ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಹಾಲಿ, ಮಾಜಿ ಶಾಸಕರು, ಸಂಸದರು, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಕನ್ನಡ, ಕಾರ್ಮಿಕ, ದಲಿತ, ರೈತ, ವಿದ್ಯಾರ್ಥಿ ಸೇರಿದಂತೆ ನೂರಾರು ಸಂಘಟನೆಗಳು, ಎಲ್ಲ ಸಮುದಾಯದ ಸಮಿತಿ ಜನ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಹಣದ ಸಹಕಾರ ನೀಡಿದ್ದಾರೆ. ಅವರನ್ನೊಳಗೊಂಡ ಸಭೆಯಲ್ಲಿ ನೂತನ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಈ ಸಂಬಂಧ ಶೀಘ್ರದಲ್ಲಿಯೇ ಸಂಚಾಲಕರ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಹಿರಂಗ ಸಭೆ ಕರೆಯಲಾಗುವುದು, ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಅವರ ಹೋರಾಟದ ಹಾದಿ ಸ್ಮರಿಸಲು ಶ್ರದ್ಧಾಂಜಲಿ ಸಭೆ ಆಯೋಜಿಸುವುದು ತುರ್ತು ಕಾರ್ಯವಾಗಿದೆ. ಈ ಸಂಬಂಧ ಸಮಿತಿ ಶೀಘ್ರದಲ್ಲಿ ದಿನಾಂಕ ಪ್ರಕಟಿಸಲಿದೆ.
ಸಮಿತಿಯ ಸದಸ್ಯ ಸಂಘಟನೆಗಳು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆಯುವ ಜಿಲ್ಲೆಯ ಜನರನ್ನೊಳಗೊಂಡ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸುವ ಅಧಿಕಾರ, ಹಕ್ಕು ಹೊಂದಿರುತ್ತವೆ. ಆದರೆ, ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ, ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ನೀರಾವರಿ ಹೋರಾಟ ಸಮಿತಿಗೆ ಮಾತ್ರ ಇರುತ್ತದೆ. ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನರಲ್ಲಿ ಗೊಂದಲ ಹುಟ್ಟುಹಾಕುವ ಕಾರ್ಯ ಜವಾಬ್ದಾರಿಯುತ ಸಂಘಟನೆಗಳು ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇವೆ. ನೀರಾವರಿ ಹೋರಾಟ ಸಮಿತಿ ಆಯೋಜಿಸುವ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಧಿಕಾರಸ್ಥರು ಸದಸ್ಯ ಸಂಘಟನೆ ಮುಖಂಡರು, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಇರುತ್ತದೆ ಎಂಬುದನ್ನು ಈ ಮೂಲಕ ಹೇಳುತ್ತೇವೆ ಎಂದರು.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
