ಬೆಂಗಳೂರು: ರೈತಾಪಿ ವರ್ಗಕ್ಕೆ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ಪ್ರಕಟಣೆ ಪ್ರಕಟಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ ನಿರ್ಧರಿಸಲಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 39.031 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ವಿಧಾನಸಭೆಯಲ್ಲಿಂದು ಬಿಜೆಪಿ ಸರ್ಕಾರದ ಕಡೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿರೂ.ಗಳಷ್ಟು ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಭೂಸಿರಿ ಜಾರಿಯಿಂದ ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯಸರ್ಕಾರದಿಂದ 2500 ರೂ. ಹಾಗೂ ನಬಾರ್ಡ್‌ನಿಂದ 7,500 ರೂ. ಸೇರಿಸಲಾಗಿದೆ. ಈ ಯೋಜನೆ ಜಾರಿಯಿಂದಾಗಿ ರಾಜ್ಯದ 50 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದರು.
ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10. 32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು725 ಕೋಟಿ ರೂ.ಗಳನ್ನು ನೀಡಲಾಗಿದೆ. ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಈ ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಳಕ್ಕಾಗಿ ರೈತ ಸಿರಿ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ 10 ಸಾವಿರ ಪ್ರೋತ್ಸಾಹಧನ ನೀಡಲು ಬೊಮ್ಮಾಯಿ ಮುಂದಾಗಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೂ ನೆರವುಕೊಟ್ಟಿರುವ ಮುಖ್ಯಮಂತ್ರಿಗಳು 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ನೆರವಿನೊಂದಿಗೆ ಅವರ ಬದುಕು ಹಸನಗೊಳಿಸಲು ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ.
ವ್ಯವಸಾಯದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿರುವ ಸರ್ಕಾರ ವಿಶ್ವಸಂಸ್ಥೆ ಸಹಯೊಗದೊಂದಿಗೆ ಡಿಜಟಲ್ ಕೃಷಿಯಲ್ಲಿ ಜಿಯೋ- ಸ್ಪೇಷಿಯಲ್ ತಂತ್ರಜ್ಙಾನ ಅಳವಡಿಕೆ 50 ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರ್ಯಕ್ರಮ ಅಳವಡಿಸಲಾಗಿದೆ.ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಒತ್ತೇಜನಕ್ಕೆ ತಲಾ 10 ಲಕ್ಷ ರೂ.ರವರೆಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯಾಂಕ್ ಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಬಡ್ಡಿ ಸಹಾಯಧನ ಒದಗಿಸಲು ಮುಂದಾಗಿದ್ದಾರೆ.
ಆಲೂಗಡ್ಡೆ ಭಿತ್ತನೆಯಲ್ಲಿ ಸ್ವಾವಂಲಭಿ ಸಾಧಿಸಲು ಇದೇ ಮೊದಲ ಭಾರಿಗೆ ಎಪಿಕಲ್ ರೂಟ್ ಕಲ್ಚರ್ ತಂತ್ರಜ್ಞಾನ ಪರಿಚಯಿಸಲು ಉದ್ದೇಶಿಸಲಾಗಿದೆ. ಅಡಿಕೆಗೆ ತಗುಲುವ ರೋಗಗಳ ನಿವಾರಣೆಗೆ ಮತ್ತು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ತೀರ್ಥಹಳ್ಳೀ ಕೃಷಿ ಮತ್ತು ಸಂಶೋಧನೆ ಕೇಂದ್ರ 10 ಕೋಟಿ ರೂ. ನೀಡಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿಶ್ವವಿದ್ಯಾಲಯ ಸ್ಥಾಪನೆ ದ್ರಾಕ್ಷಿ ಬೆಳೆಗಾರರಿಗೆ ಹಾಗೂ ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷ ರಸ ಮಂಡಳಿ ಮುಖಾಂತರ ನೂರು ಕೋಟಿ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.