ಬೆಂಗಳೂರು: ರಾಜ್ಯದಲ್ಲಿ ಇದುವರೆ 2.20 ಲಕ್ಷ ಅಕ್ರಮ ಪಡಿತರ ಚೀಟಿ ( BPL)ಗಳನ್ನು ಪತ್ತೆ ಮಾಡಿ 3 ಕೋಟಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಯಾರೆಲ್ಲಾ ಕಾನೂನುಬಾಹಿರವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ, ತಾವಾಗಿಯೇ ಸರ್ಕಾರಕ್ಕೆ ಒಪ್ಪಿಸಿ ಕ್ರಿಮಿನಲ್ ಪ್ರಕರಣ ಮತ್ತು ದಂಡದಿಂದ ವಿನಾಯ್ತಿ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿದರು.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಹ ಫಲಾನುಭವಿಗಳು ಎಷ್ಟು ಮಂದಿ ಇದ್ದರೂ ಅವರಿಗೆ ಪಡಿತರ ಆಹಾರ ಧಾನ್ಯಗಳನ್ನು ನೀಡಲಾಗುವುದು. ಆದರೆ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳನ್ನು ವಿತರಿಸುವಸಲುವಾಗಿ 7 ಕೆಜಿ ಅಕ್ಕಿ ಬದಲಾಗಿ 5 ಕೆಜಿಗೆ ಇಳಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನು ಮಾಡುತ್ತಿರುವವರ ವಿರುದ್ಧ ಸುಮಾರು 800 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.