ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕಾರು, ಜಮೀನು, ಟ್ರ್ಯಾಕ್ಟರ್, ದೊಡ್ಡ ಮನೆ ಇದ್ದರೂ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದ ಅನರ್ಹರ ಕಾರ್ಡ್ ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಆಹಾರ ಇಲಾಖೆ, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ವಿಧಾನಸೌಧದದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ. ರಾಜ್ಯದಲ್ಲಿ ಶೇ 80ರಷ್ಟು ಬಿಪಿಎಲ್ ಕುಟುಂಬಗಳಿವೆ. ಒಟ್ಟು 4.37 ಕೋಟಿ ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಇನ್ನೂ ಹೊಸ ಕಾರ್ಡ್‌ಗೆ 2.95 ಲಕ್ಷ ಅರ್ಜಿ ಸಲ್ಲಿಸಿದ್ದಾರೆ.
ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್ ಕಾರ್ಡ್ ಪ್ರಮಾಣ ಕಡಿಮೆ ಆಗದಿರಲು ಕಾರಣವೇನು…? ತಮಿಳುನಾಡಿನಲ್ಲಿ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇ 40ರಷ್ಟಿದೆ. ರಾಜ್ಯದಲ್ಲಿ ಈ ಕುರಿತು ಪರಿಶೀಲಿಸಿ, ಅನರ್ಹರನ್ನು ಕೈಬಿಡುವ ಕಾರ್ಯ ನಡೆಯಬೇಕು. ಜೊತೆಗೆ ಕಾರ್ಡ್‌ಗಳಲ್ಲಿರುವ ಮೃತ ಸದಸ್ಯರ ಹೆಸರು ತೆಗೆದು ಹಾಕಲು ಸಿಎಂ ಸೂಚನೆ ನೀಡಿದ್ದಾರೆ.



