ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರನ್ನು ಬರ ಗ್ಯಾರಂಟಿ ಸಿಎಂ ಎಂದು ಬಿಜೆಪಿ ಲೇವಡಿ ಮಾಡಿದೆ. ಕಾಂಗ್ರೆಸ್ ಬಂದಿದೆ ಬರ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ ಎಂದು ಸಿದ್ದರಾಮಯ್ಯ ಚಿತ್ರದ ಮೇಲೆ ಬರ ಛಾಯೆಯ ಚಿತ್ರ ಬಿಡಿಸಿ, ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಾಲ ಕಾಲಕ್ಕೆ ರಾಜ್ಯದಲ್ಲಿ ಬರ ಗ್ಯಾರಂಟಿ ಎನ್ನುವಂತಾಗಿದೆ. ಈ ಬಾರಿ ಸ್ವಲ್ಪ ಹೆಚ್ಚಾಗಿದೆ. ಮಳೆ ಕೊರತೆಯಿಂದ ರಾಜ್ಯದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷ ಅತಿ ಹೆಚ್ಚು ಮಳೆ ಬೀಳುವ ಮಲೆನಾಡು ಸಹ ಬರಗಾಲದ ನಾಡಾಗಿದೆ. ಕಳೆದ ವರ್ಷ ತುಂಬಿ ತುಳುಕುತ್ತಿದ್ದ ಜಲಾಶಯಗಳು ಒಂದೆರೆಡು ತಿಂಗಳಲ್ಲಿ ಬರಿದಾಗುವ ಹಂತ ತಲುಪಿವೆ.
ಸಿದ್ದರಾಮಯ್ಯ ಸರ್ಕಾರ ಬಂದ ಮೂರು ತಿಂಗಳ ಸರ್ಕಾರದ ಅವಧಿಯಲ್ಲಿ ಈಗಾಗಲೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳನ್ನು ಲೇವಡಿ ಮಾಡುವಷ್ಟು ಸೊಕ್ಕು, ಸಿದ್ದರಾಮಯ್ಯರವರ ಸಂಪುಟದ ಸಚಿವರಿಗೆ ಬಂದಿದೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಅವೆರಡೂ ಇಲ್ಲವಾದರೆ ಬೆಲೆ ಕುಸಿತ. ಹೀಗಿದೆ ನಮ್ಮ ರೈತನ ಬದುಕು. ನಮಗೆ ಸರಿಯಾಗಿ ಬೆಳೆ ಬಂದು, ಆ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕರೆ ನಾವು ಸರ್ಕಾರಕ್ಕೆ ಬೇಕಿದ್ದರೆ ಸಾಲ ಕೊಡುತ್ತೇವೆ ಎಂಬ ಸ್ವಾಭಿಮಾನಿ ರೈತರ ಜೀವನ ಈಗ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗುತ್ತಿದೆ. ರೈತರ ಜೀವನ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಬಾರದು ಎಂಬ ಕಾರಣಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ 4000 ನೀಡುತ್ತಿದ್ದ ಬಿಜೆಪಿ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದುಕೊಂಡಿದೆ ಎಂದು ಬಿಜಪಿ ಆರೋಪಿಸಿದೆ.



