Connect with us

Dvgsuddi Kannada | online news portal | Kannada news online

ಶಿಶು ಮಾರಾಟ ಜಾಲ ಪತ್ತೆ; 10 ಮಕ್ಕಳ ಮಾರಾಟಕ್ಕೆ ಬುಕ್ ; ಗಂಡು, ಹೆಣ್ಣು ಮಗುವಿಗೆ ಪ್ರತ್ಯೇಕ ದರ ನಿಗದಿ- 8 ಆರೋಪಿಗಳ ಬಂಧನ

images 78

ಪ್ರಮುಖ ಸುದ್ದಿ

ಶಿಶು ಮಾರಾಟ ಜಾಲ ಪತ್ತೆ; 10 ಮಕ್ಕಳ ಮಾರಾಟಕ್ಕೆ ಬುಕ್ ; ಗಂಡು, ಹೆಣ್ಣು ಮಗುವಿಗೆ ಪ್ರತ್ಯೇಕ ದರ ನಿಗದಿ- 8 ಆರೋಪಿಗಳ ಬಂಧನ

ಬೆಂಗಳೂರು: ಇತ್ತೀಚೆಗೆ 900 ಭ್ರೂಣ ಹತ್ಯೆ ಪ್ರಕರಣದ ಪತ್ತೆ ಬೆನ್ನಲ್ಲೇ ಸಿಸಿಬಿ ಪೊಲೀಸರು ಇದೀಗ ಶಿಶು ಮಾರಾಟ ಜಾಲವನ್ನು ಬೇಧಿಸಿದ್ದಾರೆ. ಮಕ್ಕಳನ್ನು ಮಾರಾಟಕ್ಕಾಗಿಯೇ ಜನ್ಮ ನೀಡುವ ಜಾಲ ಪತ್ತೆ ಮಾಡಲಾಗಿದೆ. ಈ ಜಾಲ ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಅವ್ಯಾಹತವಾಗಿ ಮಗು ಮಾರಾಟ ಮಾಡಿದ್ದಾರೆ. ತನ್ನದೇ ಮಗು ಮಾರಾಟ ಮಾಡಿದ ಮಹಿಳೆ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ. ಸದ್ಯ 10 ಮಕ್ಕಳ ಮಾರಾಟ ಬುಕ್ ಮಾಡಿದ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಮಗವೊಂದಕ್ಕೆ 4ರಿಂದ 8ಲಕ್ಷ ದರ ನಿಗದಿ ಮಾಡಿದ್ದರು.

ಕುಡುಕನೋರ್ವ ಮದ್ಯದ ಅಮಲಿನಲ್ಲಿ ನೀಡಿದ ಮಾಹಿತಿ ಆಧರಿಸಿ ಮೂವರು ಮಹಿಳೆಯರು, ಒಬ್ಬ ಪುರುಷನನ್ನು ಸೇರಿ ನಾಲ್ವರನ್ನು ಬಂಧಿಸಿ ಗಂಡು ಮಗುಗಳನ್ನು ರಕ್ಷಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ ಬಂಧಿತ ಆರೋಪಿಗಳಾಗಿದ್ದು,ಮಹಾಲಕ್ಷ್ಮಿ, ಗೋಮತಿ, ರಾಧಾಮಣಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.ಹಸುಗೂಸಿನ ಮಾರಾಟವು ಮಕ್ಕಳು ಹುಟ್ಟಿದ ಮೇಲೆ ನಡೆಯುವುದು ಮಾತ್ರವಲ್ಲ,ಮಕ್ಕಳು ಹುಟ್ಟುವ ಮೊದಲೇ ಅಥವಾ ಗರ್ಭ ಧರಿಸುವ ಮೊದಲೇ ಮಾರಾಟದ ವ್ಯವಹಾರ ಕುದುರಿಸಲಾಗುತ್ತಿತ್ತು.
ಕಂದಮ್ಮಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ ಖದೀಮರು ನೆಟ್ ವರ್ಕ್ ಬೆಳೆಸಿ ದಂಧೆಯನ್ನು ನಡೆಸುತ್ತಿದ್ದರು, ಮೊದಲು ಗ್ಯಾಂಗ್ ನ ಆರೋಪಿಗಳು ಬಡ ಮಹಿಳೆಯರನ್ನು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆಯುವ ಕೆಲವು ವರ್ಗಗಳನ್ನು ಗುರುತಿಸುತ್ತದೆ. ಅವರಿಗೆ ಹಣದ ಆಮಿಷವೊಡ್ಡಿ ಮಗು ಹುಟ್ಟುವ ಮೊದಲೇ ಡೀಲ್ ಮಾಡಿಕೊಳ್ಳಲಾಗುತ್ತದೆ. ಅವರು ಗರ್ಭ ಧರಿಸಿ ಮಕ್ಕಳಾದ ಬಳಿಕ ಅವುಗಳನ್ನು ಈ ಟೀಮ್ ಖರೀದಿ ಮಾಡುತ್ತದೆ. ಬಳಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಾರೆ.

ಗರ್ಭ ಧರಿಸುವ ಯುವತಿಯರನ್ನು ಗುರಿ ಮಾಡಿಕೊಂಡಿದ್ದರೆ, ಇನ್ನೊಂದು ಕಡೆಯಲ್ಲಿ ಮಕ್ಕಳಿಗಾಗಿ ಬೇಡಿಕೆ ಇಡುವ ಪೋಷಕರ ಜತೆಗೂ ಇವರು ನೆಟ್‌ವರ್ಕ್ ರಚನೆ ಮಾಡಿಕೊಂಡಿರುತ್ತಾರೆ. ಹಾಗೆ ಇಲ್ಲಿ ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರಿಗೆ ಮಾರಾಟ ಮಾಡಲಾಗುತ್ತದೆ. ಈ ದಂಧೆಕೋರರ ಕೈಯಲ್ಲಿ ಆಗಲೇ 60 ಮಕ್ಕಳಿಗೆ ಬೇಡಿಕೆ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮುರುಗೇಶ್ವರಿ ಎಂಬ ಮಹಿಳೆ ಗರ್ಭ ಧರಿಸಿದ್ದು ಆಕೆಗೆ ಹಣಕಾಸು ಮತ್ತಿತರ ಸಮಸ್ಯೆಯಿರುವ ಅಸಹಾಯಕತೆ ಗ್ಯಾಂಗ್‌ನ ಗಮನಕ್ಕೆ ಬಂದಿತ್ತು. ಬಹುಶಃ ಆಕೆಯನ್ನು ಪರೀಕ್ಷೆ ಮಾಡುತ್ತಿದ್ದ ವೈದ್ಯರೇ ಈ ಗ್ಯಾಂಗ್‌ನ ಪರಿಚಯ ಮಾಡಿಸಿರುವ ಸಾಧ್ಯತೆಗಳಿವೆ. ಮರುಗೇಶ್ವರಿಯನ್ನು ಭೇಟಿ ಮಾಡಿದ ಗ್ಯಾಂಗ್ ಆಕೆಗೆ ಹಣಕಾಸು ಮತ್ತು ನೈತಿಕ ಬೆಂಬಲವನ್ನು ನೀಡಿತ್ತು. ಮತ್ತು ಆಕೆಯ ಎಲ್ಲ ಪೋಷಣೆ ನೋಡಿಕೊಳ್ಳುವುದಾಗಿ ತಿಳಿಸಿತ್ತು. ಈ ಒಂದು ಡೀಲ್‌ನ ಬಗ್ಗೆ ಅದ್ಯಾವುದೋ ಮೂಲದಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಅದರ ಜತೆಗೆ ನವೆಂಬರ್ 24ರಂದು ಒಂದು ಮಗುವಿನ ಮಾರಾಟದ ಡೀಲ್ ನಡೆಯಲಿದೆ ಎಂಬ ಮಾಹಿತಿ ಇದಾಗಿತ್ತು.

ಪೊಲೀಸರು ಡೀಲ್ ನಡೆಯಲಿದೆ ಎಂದು ನಿಗದಿಯಾಗಿದ್ದ ಆರ್‌ಆರ್ ನಗರ ದೇವಸ್ಥಾನದ ಬಳಿ ಹೊಂಚು ಹಾಕಿ ಕುಳಿತಿದ್ದರು. ಮಧ್ಯವರ್ತಿಗಳು ತಮಿಳುನಾಡು ನೋಂದಣಿಯ ಕಾರಿನಲ್ಲಿ ಬಂದಿದ್ದರೆ, ಸಿಸಿಬಿ ಅಧಿಕಾರಿಗಳು ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಲ್ಲೇ ಈ ದಂಧೆಕೋರರನ್ನು ಮಟ್ಟ ಹಾಕಲಾಗಿದೆ.

ಈ ದಂಧೆಕೋರರು ಎಷ್ಟೊಂದು ಪ್ರಭಾವಿಗಳಾಗಿದ್ದಾರೆ ಎಂದರೆ ಇವರು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರನ್ನು ಕೂಡಾ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಐವಿಎಫ್ ಮತ್ತಿತರ ಕೃತಕ ಗರ್ಭಧಾರಣಾ ವಿಧಾನಗಳ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿದೆ.ಅಂದರೆ ಅಸಹಾಯಕ ಯುವತಿಯರ ಗುರುತಿಸಿ ಒಂದೋ ಅವರಿಗೆ ಅವರದೇ ಪತಿಯ ಮೂಲಕ ಮಗುವನ್ನು ಪಡೆದು ಮಾರಾಟ ಮಾಡುವಂತೆ ಹೇಳುವುದು, ಇಲ್ಲವೇ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವಂತೆ ಆಮಿಷ ಒಡ್ಡಲಾಗುತ್ತದೆ. ಒಮ್ಮೆ ಆ ಮಹಿಳೆ ಈ ಗ್ಯಾಂಗ್ ಜತೆ ಒಪ್ಪಂದ ಮಾಡಿಕೊಂಡಳೆಂದರೆ ಬಳಿಕ ಆಕೆಯ ಎಲ್ಲಾ ಆರೋಗ್ಯ ತಪಾಸಣೆಯ ನಿಗಾವನ್ನು ಇದೇ ತಂಡ ವಹಿಸಿಕೊಳ್ಳುತ್ತದೆ.

ಕೊನೆಗೆ ಹೆರಿಗೆಯ ಹಂತದಲ್ಲಿ ಆಸ್ಪತ್ರೆಗೆ ಸೇರಿಸುವ ಸೇರಿಸಿ ಅಲ್ಲಿಂದಲೇ ಮಗುವನ್ನು ಹಸ್ತಾಂತರಿಸಲಾಗುತ್ತಿದ್ದು,ಇದು ಅತ್ಯಂತ ಗೌಪ್ಯವಾಗಿ ಕುಟುಂಬದ ಕೆಲವರಿಗಷ್ಟೇ ಗೊತ್ತಿರುತ್ತದೆ.ಕೊನೆಗೆ ಹೆರಿಗೆ ಹಂತದಲ್ಲೇ ಮಗು ಸಾವಾಗಿದೆ ಎಂತಲೋ, ಹುಟ್ಟಿದ ಬಳಿಕ ಪ್ರಾಣ ಬಿಟ್ಟಿದೆ ಎಂದೋ ಕತೆ ಕಟ್ಟಲಾಗುತ್ತದೆ. ಆದರೆ, ಮಗು ಮಾತ್ರ ಇನ್ಯಾರದೋ ಪಾಲಾಗಿರುತ್ತದೆ.

ಈ ಜಾಲ ಒಂದು ಮಗುವಿನ ಮಾರಾಟಕ್ಕೆ ಪಡೆಯುವ ಮೊತ್ತ 4ರಿಂದ 8 ಲಕ್ಷ ರೂ. ಈಗ ಬಂಧನಕ್ಕೆ ಒಳಗಾಗಿರುವ ತಂಡವು ಮಗು ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದೆ. ಸದ್ಯ ಹತ್ತು ಮಕ್ಕಳನ್ನು ಬುಕ್ ಮಾಡಿಕೊಂಡ ಪೋಷಕರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಉಳಿದವರ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದು,ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top