ಹುಬ್ಬಳ್ಳಿ : ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಈಗತಾನೇ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ರೈತರು, ಬಡವರು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಸ್ಥರು, ಗಾರ್ಮೆಂಟ್ಸ್ ನೌಕರರು, ಕೈಗಾರಿಕಾ ಉದ್ಯಮಿಗಳು ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳು ನಿಧಾನವಾಗಿ ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ಪುನಃ ಬಂದ್ ನಡೆಸುವ ಮೂಲಕ ಜನರಿಗೆ ತೊಂದರೆ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಕಾಯ್ದೆ ಯಾರಿಗೂ ತೊಂದರೆಯಾಗುವುದಿಲ್ಲ. ನಾನು ಈಗಲೂ ಕೂಡ ರೈತ ಸಂಘಟನೆಗಳು ಹಾಗೂ ಮುಖಂಡರಲ್ಲಿ ಬಂದ್ ಆಚರಿಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡುತ್ತೇನೆ. ಒಬ್ಬರಿಗೆ ತೊಂದರೆ ಕೊಟ್ಟು ಬಂದ್ ಮಾಡುವುದರಿಂದ ಉಪಯೋಗವಿಲ್ಲ. ಏನೇ ಸಮಸ್ಯೆಗಳಿದ್ದರೂ ಬಂದು ಚರ್ಚಿಸಿ ಎಂದು ಮನವಿ ಮಾಡಿದರು.



