ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಯಾಗಿರುವ ನೈಟ್ ಕರ್ಪ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಇದು ಕೃಷಿ ಚಟುವಟಿಕೆಗಳಿಗೆ ಅನ್ವಯವಾಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಲವೆಡೆಗಳಲ್ಲಿ ಅಧಿಕಾರಿಗಳು ಕೃಷಿ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳ ಈ ಕ್ರಮ ಸರಿಯಲ್ಲ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರೈತರಿಗೆ ಬಿತ್ತನೆ ಕಾರ್ಯ, ರಸಗೊಬ್ಬರ, ಮಾರುಕಟ್ಟೆಗೆ ಧಾನ್ಯ ಸಾಗಾಟ ಸೇರಿದಂತೆ ಯಾವುದೇ ಕೆಲಸಗಳಿಗೆ ಪೊಲೀಸರು ಅಡ್ಡಿಪಡಿಸುವಂತಿಲ್ಲ. ಕೊರೊನಾ ಸುರಕ್ಷತೆ, ಸಾಮಾಜಿಕ ಅಂತರದ ಜೊತೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.