ಬೆಂಗಳೂರು: ಇನ್ಮುಂದೆ ನೀರಾವರಿ ಪ್ರದೇಶ ಸೇರಿದಂತೆ ಎಲ್ಲಾ ಕಡೆ ಕೃಷಿ ಹೊಂಡಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ವಿಧಾನ ಪರಿಷತ್ ನಲ್ಲಿ ಕೇಶವಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ಕೃಷಿ ಹೊಂಡಗಳನ್ನು ನೀರಾವರಿ ಪ್ರದೇಶ ಹೊರತುಪಡಿಸಿ ಬೇರೆ ಬೇರೆ ಕಡೆ ತೆರೆಯಲಾಗುತ್ತಿತ್ತು. ಇನ್ಮುಂದೆ ನೀರಾವರಿ ಪ್ರದೇಶದಲ್ಲೂ ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಮೊದಲು 106 ತಾಲ್ಲೂಕುಗಳಲ್ಲಿ ಮಾತ್ರ ಕೃಷಿ ಹೊಂಡಗಳನ್ನು ತೆರೆಯಲು ಅವಕಾಶವಿತ್ತು. ಇದು ಎಲ್ಲ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ನೀರಾವರಿ ಪ್ರದೇಶಗಳಲ್ಲೂ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹೊಸದಾಗಿ ಕೃಷಿ ಹೊಂಡಗಳನ್ನು ತೆರೆಯುವವರು ಕಡ್ಡಾಯವಾಗಿ ತಂತಿಬೇಲಿಗಳನ್ನು ಅಳವಡಿಸಬೇಕು. ಅಲ್ಲದೆ ಅಲ್ಲಿ ಬೋರ್ಡ್ ಗಳನ್ನು ಹಾಕಬೇಕು. ಸದ್ಯದಲ್ಲೇ ಇದಕ್ಕಾಗಿ ಹೊಸದೊಂದು ಆ್ಯಪ್ ತೆರೆಯಲಾಗುವುದು. ಕೃಷಿ ಹೊಂಡ ತೆರೆಯುವ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ.40ರಿಂದ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ನೀರು ಸಂಗ್ರಹಣೆಯಾಗುವುದರಿಂದ ರೈತರು ಮಳೆಯಿಲ್ಲದ ಸಮಯದಲ್ಲಿ ಬಳಸಿಕೊಳ್ಳಬಹುದು ಎಂದರು.



