ಮಳವಳ್ಳಿ: ಮಂಡ್ಯ-ಮೈಸೂರು, ರಾಮನಗರಕ್ಕೆ ಮಾತ್ರ ಜೆಡಿಎಸ್ ಪಕ್ಷ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಪ್ರಬಲವಾಗಿ ಬೆಳೆದಿದೆ. 2023ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ. ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರು ಹೇಳಿದರು.
ಕೆ.ಎಂ.ದೊಡ್ಡಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಾಗುವುದು, 2023ಕ್ಕೆ ಕುಮಾರ ಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ . ಎಚ್.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕ ಮನುಷ್ಯ. ಅವರು ಕೇವಲ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎಂದು ವಿರೋಧಿಗಳು ಅಣಕ ಮಾಡಿದರು. ಅವರು ಎಲ್ಲ ಜಿಲ್ಲೆಗಳಿಗೂ ಅನುದಾನವನ್ನು ಪಕ್ಷಭೇದ ಮರೆತು ನೀಡಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ಹೆಚ್ಚು ಅಭಿಮಾನ ಇದ್ದುದರಿಂದ ಸ್ವಲ್ಪ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆಮಾಡಿದ್ದ ಸಿ.ಎಸ್.ಪುಟ್ಟರಾಜು ಅವರಿಗೆ 5.25 ಲಕ್ಷ ಮತಗಳನ್ನು ನೀಡಿ ಆಯ್ಕೆಗೊಳಿಸಿದ್ದರು. ನನಗೆ ಮಂಡ್ಯ ಜಿಲ್ಲೆಯ ಜನತೆ ಮೋಸಮಾಡಲಿಲ್ಲ. ಪುಟ್ಟರಾಜು ಅವರಿಗಿಂತಲೂ 50 ಸಾವಿರ ಹೆಚ್ಚು ಮತಗಳನ್ನು ನೀಡಿದ್ದಾರೆ. ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಿದ್ದೇನೆ ಹೊರತು ಮಂಡ್ಯ ಜಿಲ್ಲೆಯ ಜನತೆಯಿಂದಲ್ಲ ಎಂದರು.



