ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 2 ಸಾವಿರ ಅಂಗನವಾಡಿಗಳನ್ನು ತೆರೆಯಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಯು.ಬಿ.ವೆಂಕಟೇಶ್ ಅವರು ಅಂಗನವಾಡಿ ವಿಷಯ ಪ್ರಸ್ತಾಪಿಸಿದರು. ಬೆಂಗಳೂರಿನಲ್ಲಿ 4.44 ಲಕ್ಷ ಹೆಣ್ಣುಮಕ್ಕಳು, 4 .72 ಲಕ್ಷ ಗಂಡು ಮಕ್ಕಳು ಸೇರಿ 9.16 ಲಕ್ಷ ಮಕ್ಕಳಿದ್ದಾರೆ. ಮುಂದಿನ ದಿನಗಳಲ್ಲಿಇದು 10 ಲಕ್ಷ ಆಗಲಿದೆ.ಈಗ ಇರುವ ಅಂಗನವಾಡಿಗಳ ಸಂಖ್ಯೆ ಮಕ್ಕಳಿಗೆ ಅನುಗುಣವಾಗಿ ಇಲ್ಲ. ಅಂಗನವಾಡಿ ಸಂಖ್ಯೆಗಳನ್ನು ಹೆಚ್ಚಿಸಿ ಮತ್ತು ಅವುಗಳಿಗೆ ಉತ್ತಮ ಸೌಲಭ್ಯ ಕೊಟ್ಟು ಮೇಲ್ದರ್ಜೆಗೇರಿಸಿ. ಬೆಂಗಳೂರಿನಲ್ಲಿ ಕೆಲಸ ಮಾಡುವ ಅಂಗನವಾಡಿ ನೌಕರರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡಿ ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಸಚಿವೆ ಶಶಿಕಲಾ ಅವರು, ರಾಜ್ಯದಲ್ಲಿ 2420 ಅಂಗನವಾಡಿಗಳಿವೆ, 55 ಅಂಗನವಾಡಿ ಕಾರ್ಯಕರ್ತೆಯರು, 209 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೇಮಕಾತಿ ನಡೆಯುತ್ತಿದೆ. ಅಂಗನವಾಡಿ ಸೌಲಭ್ಯವನ್ನು ಉನ್ನತೀಕರಿಸಲು ಸಂಸ್ಥೆಗಳ ಸಾಮಾಜಿಕ ನಿಧಿ ಬಳಕೆ ಮಾಡಲಾಗುತ್ತಿದೆ ಎಂದರು.