ಕಾಗವಾಡ : ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯ ಸಹಿಸಿಕೊಂಡು ಬಂದ ಉತ್ತರ ಕರ್ನಾಟಕದವರು ಮುಂದೊಂದು ದಿನ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟರೆ ಆಶ್ಚರ್ಯವಿಲ್ಲ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ಪರಿಸ್ಥಿತಿ ಪೂರಕವಾಗಿವೆ. ಕನ್ನಡಿಗರು ಭೌಗೋಳಿಕವಾಗಿ ಒಂದಾದರೆ ಸಾಲದು, ಭಾವನಾತ್ಮಕವಾಗಿ ಒಂದಾಗಬೇಕು. ನಮ್ಮ ಈ ಭಾಗದ ಜನಪ್ರತಿನಿಧಿಗಳು ಸದಾಕಾಲ ಹೋರಾಡುತ್ತಲೇ ಇರಬೇಕು. ಕನ್ನಡ ಪ್ರದೇಶಗಳು ರಾಜಕೀಯವಾಗಿ ಒಂದುಗೂಡಿವೆ. ಆದರೆ, ಏಕೀಕರಣ ಆಶಯ ಈಡೇರಿಲ್ಲ ಎಂದು ತಿಳಿಸಿದರು.
ಅಗತ್ಯವಿರುವ ಕಡೆಗಳಲ್ಲಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭಿಸಿ ಅಲ್ಲಿ ಕನ್ನಡ ಬೆಳೆಸುವ ಕಾರ್ಯವಾಗಬೇಕು. ಪ್ರಾದೇಶಿಕ ಅಸಮತೋಲನ ಎಲ್ಲ ಕ್ಷೇತ್ರಗಳಲ್ಲೂ ಎದ್ದು ಕಾಣುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಬಂದಷ್ಟು ನೀರಾವರಿ ಯೋಜನೆಗಳು ಉತ್ತರದಲ್ಲಿ ಬಂದಿಲ್ಲ. ಸರ್ಕಾರಿ ಶಾಲೆ, ಕಾಲೇಜು ಹಾಗೂ ಉದ್ಯಮಗಳ ವಿಷಯದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಬೆಂಗಳೂರಿನ ಕಲಾವಿದರು ಹಾಗೂ ಸಾಹಿತಿಗಳಿಗೇ ಮೀಸಲಿಟ್ಟಂತೆ ಹಂಚಿ ಹೋಗುತ್ತದೆ.
ವ್ಯಾಪಾರಿ ಭಾಷೆ ಬೇರೆ, ಮಾತೃಭಾಷೆ ಬೇರೆ. ಮರಾಠಿಯಲ್ಲಿ ರಸೀದಿ ನೀಡಿದಾಕ್ಷಣ ಬೆಳಗಾವಿ ಮಹಾರಾಷ್ಟ್ರದ್ದು ಆಗುವುದಿಲ್ಲ. ಮುಂಬೈ ಕರ್ನಾಟಕಕ್ಕೆ ಸೇರಿಸಿ ಅಂತ ಏಕೆ ಕೇಳಬಾರದು ಎಂದು ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು . ಮಹಾನಗರ ಪಾಲಿಕೆ ಚುನಾವಣೆ ಬಂದಿರುವುದರಿಂದ ಕೆಲವರು ಇಂತಹ ತಗಾದೆ ತೆಗೆಯುತ್ತಿದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.



