ಬೆಂಗಳೂರು: 2021 ವರ್ಷವನ್ನು ಹೋರಾಟ ಮತ್ತು ಸಂಘಟನಾತ್ಮಕ ವರ್ಷ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಹೀಗಾಗಿ ಕಾರ್ಯಕರ್ತರು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ, ಅಲ್ಲಿ ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಪ್ರತಿಭಟಿಸಬೇಕಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿಬಿಎಂಪಿ ವಿರುದ್ಧ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಇಡೀ ವರ್ಷ ಹೋರಾಟ ನಡೆಸಲಾಗುವುದು. ಸರ್ಕಾರದ ತೆರಿಗೆ ಹೆಚ್ಚಳ ನೀತಿಯ ವಿರುದ್ಧ ನಿರಂತರ ಧ್ವನಿ ಎತ್ತಲಾಗುವುದು ಎಂದು ಘೋಷಿಸಿದರು.
ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ. ಸರ್ಕಾರದ ನಿಷ್ಕ್ರಿಯವಾಗಿದ್ದು, ನಗರದ ಒಂದೂವರೆ ಕೋಟಿ ಜನ ಪಾವತಿಸುವ ತೆರಿಗೆಯಿಂದ ರಾಜ್ಯದ ಮುಕ್ಕಾಲು ಭಾಗದ ಜನರ ಸೌಲಭ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬೆಂಗಳೂರಿಗೆ ಸ್ವಚ್ಛ, ಹಸಿರು ನಗರ ಎಂಬ ಹೆಸರಿತ್ತು. ಕೆಂಪೇಗೌಡರು ಕಟ್ಟಿರುವ ಈ ನಾಡಿನಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದಾರೆ. ಆದರೆ, ಬಿಜೆಪಿ ಆಡಳಿತ ಬಿಬಿಎಂಪಿ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಹೀಗಾಗಿ ಬಿಬಿಎಂಪಿ ಚುನಾವಣೆ ನಡೆಸಲೂ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಎಲ್ಲದಕ್ಕೂ ಲಂಚ ಕೊಡಬೇಕಿದೆ. ಕಚೇರಿಯ ಬಾಗಿಲು ಮುಟ್ಟಲೂ ಒಂದು ರೇಟ್ ಫಿಕ್ಸ್ ಆಗಿದೆ. ಕೊರೊನಾ ಸಂದರ್ಭದಲ್ಲಂತೂ ಲೂಟಿ ಹೊಡೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳು ಮುಚ್ಚಿ ಹೋಗಿವೆ. ಉದ್ಯೋಗ ವಿಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಲಾಕ್ ಡೌನ್, ಸೀಲ್ ಡೌನ್ ಹೆಸರಿನಲ್ಲಿ ಮತ್ತಷ್ಟು ತೊಂದರೆ ಮಾಡಲಾಗಿದೆ. ಬ್ಯಾಂಕ್ ಮೂಲಕ ಸಹಾಯ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಈವರೆಗೂ ಯಾರಿಗೂ ನೆರವು ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ,ಬಿಜೆಪಿ ಅಧಿಕಾರಾವಧಿಯಲ್ಲಿ ಕಸ ನಿರ್ವಹಣೆ ಸರಿಯಾಗಿ ನಡೆದಿಲ್ಲ. ಮೆಟ್ರೊ ನಗರ, ಉದ್ಯಾನನಗರಿ ಎಂದು ಹೆಸರು ಪಡೆದಿರುವ ಬೆಂಗಳೂರಿಗೆ ಗಾರ್ಬೆಜ್ ನಗರ ಎಂದು ಕೆಟ್ಟ ಹೆಸರು ತಂದುಕೊಟ್ಟರು ಎಂದು ಕಿಡಿಕಾರಿದರು.



