ಬೆಂಗಳೂರು: ಕೇಂದ್ರ ಸರಕಾರ ಡೀಸೆಲ್, ಟೋಲ್, ವಿಮೆ ದರವನ್ನು ಕಡಿಮೆ ಮಾಡದಿದ್ದರೆ ದೇಶದೆಲ್ಲೆಡೆ ಸರಕು-ಸಾಗಣೆ ವಾಹನಗಳನ್ನು ಮಾ.15ರಿಂದ ಸ್ಥಗಿತಗೊಳಿಸಲಾಗುವುದೆಂದು ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಾರಿ ಮಾಲೀಕರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಅನೇಕ ಸಲ ಮನವಿ ಮಾಡಿದ್ದೇವೆ. ಆದರೆ, ಸರಕಾರಿ ಅಧಿಕಾರಿಗಳು ನಮ್ಮ ಕೋರಿಕೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದರು.
ಕೇಂದ್ರ ಸರಕಾರ ಡೀಸೆಲ್ ದರವನ್ನು ಸತತವಾಗಿ ಏರಿಕೆ ಮಾಡುತ್ತಿದೆ. ಹೋಗುತ್ತಿದೆ. ಈ ಹಿಂದೆ ಪ್ರತಿ ಕಿಮೀಗೆ 28ರೂ.ಖರ್ಚು ಮಾಡುತ್ತಿದ್ದೆವು. ಆದರೆ, ಈಗ 40ರೂ.ಖರ್ಚಾಗುತ್ತಿದೆ. ಇದರಿಂದ ಲಾರಿ ಮಾಲಕರು ನಷ್ಟದಿಂದಲೇ ವ್ಯವಹಾರ ಮಾಡುತ್ತಿದ್ದಾರೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಟೋಲ್ ವೆಚ್ಚವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೂ ನಿರಂತರವಾಗಿ ಹೊಸ ಟೋಲ್‍ಗಳನ್ನು ಸೇರಿಸಲಾಗುತ್ತಿದೆ. ಒಪ್ಪಂದ ಮುಗಿದ ಅನೇಕ ಟೋಲ್‍ಗಳಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಲಾಗುತ್ತಿದೆ. ನೈಸ್ ರಸ್ತೆಯಲ್ಲಿ ಪ್ರತಿ ದಿನ ವಾಣಿಜ್ಯ ವಾಹನಗಳಿಂದ 1.5ಕೋಟಿ ರೂ.ಸಂಗ್ರಹ ಮಾಡಲಾಗುತ್ತಿದೆ. ಪ್ರತಿ ಲಾರಿ 1100 ರೂ.ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಹಸಿರು ತೆರಿಗೆ ಹೆಚ್ಚಳ, ಬಿಎಸ್ 6ವಾಹನಗಳ ವೆಚ್ಚ ಹೆಚ್ಚಳ ಹಾಗೂ ವಾಹನ ಬಿಡಿಭಾಗಗಳ ದರ ಹೆಚ್ಚಳ ಸೇರಿದಂತೆ ಲಾರಿ ಮಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇವೆಲ್ಲ ಸಮಸ್ಯೆಗಳನ್ನು ಕೂಡಲೇ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಲಾರಿ ಮಾಲಕರೊಂದಿಗೆ ಸಕರಾತ್ಮಕವಾಗಿ ಚರ್ಚಿಸಬೇಕು. ಇಲ್ಲದಿದ್ದರೆ, ಮಾ.15ರಿಂದ ದೇಶಾದ್ಯಂತ ಜಿಲ್ಲೆ, ತಾಲೂಕು ಮಟ್ಟದ ಉದ್ಯಮದಲ್ಲಿ ತೊಡಗಿರುವ ಲಾರಿ ಮಾಲಕರು ತಮ್ಮ ವಾಹನಗಳನ್ನು ಸ್ಥಗಿತಗೊಳಿಸಲಿದ್ದಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.



