ಬೆಂಗಳೂರು: ಡಿಸೆಂಬರ್ ಒಳಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೆ ತರಲು ರಾಜ್ಯ ಸರ್ಕಾರಿ ನೌಕರರ ಸಂಘ ಬದ್ಧವಾಗಿದೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.
ಉಡುಪಿಯಲ್ಲಿ ನಡೆದ ಜಿಲ್ಲಾ ಸರ್ಕಾರಿ ನೌಕರರ ವಾರ್ಷಿಕ ಸಮಾವೇಶ ಹಾಗೂ ಸೇವಾ ನಿವೃತ್ತಿಗೊಳ್ಳುತ್ತಿರುವ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.7ನೇ ವೇತನ ಆಯೋಗದ ರಚನೆ ಸಂಬಂಧ ತಿಂಗಳೊಳಗೆ ಸಮಿತಿ ರಚನೆಯಾಗಲಿದ್ದು, ಈ ವರ್ಷದೊಳಗೆ ಪರಿಷ್ಕೃತ ವೇತನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ವೇತನ ಪರಿಷ್ಕರಣೆಯಿಂದ ಡಿ’ ದರ್ಜೆ ನೌಕರರಿಗೆ 10 ಸಾವಿರ, ‘ಸಿ’ ದರ್ಜೆ ನೌಕರರರಿಗೆ 20 ಸಾವುರ, ‘ಬಿ’ ದರ್ಜೆ ಅಧಿಕಾರಿಗಳಿಗೆ 30 ಸಾವಿರ ಹಾಗೂ ‘ಎ’ ದರ್ಜೆ ಅಧಿಕಾರಿಗಳಿಗೆ 40 ಸಾವಿರ ವೇತನ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದ, ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ನಿವೃತ್ತ ನೌಕರರು ನಿವೃತ್ತಿಯಾದ ದಿನವೇ ಪಿಂಚಣಿ ಪಡೆಯವಂತೆ ಯೋಜನೆ ರೂಪಿಸಲಾಗುತ್ತಿದೆ. ಕೆಜಿಐಡಿ ಸೌಲಭ್ಯಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ವಾರದೊಳಗೆ ಸಾಲದ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆ ತಿಂಗಳೊಳಗೆ ಜಾರಿಗೆ ತರುವ ಚಿಂತನೆಯಿದೆ.



