ದಾವಣಗೆರೆ: ಜಿಲ್ಲೆಯ ಕೆಲವು ಅಂಗನವಾಡಿ, ಹಾಗೂ ಶಾಲೆಗಳಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ನೀರು ಪೂರೈಕೆ ಇಲ್ಲದ ಕಾರಣಕ್ಕಾಗಿ ಬಳಸಲಾಗುತ್ತಿಲ್ಲ. ಶೌಚಾಲಯಗಳನ್ನು ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡೇ ಕಟ್ಟುವುದು ಸೂಕ್ತ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕೆ. ಶಾಂತಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸುವ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನೀರು ಪೂರೈಸುವ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಶೌಚಾಲಯ ಇಲ್ಲದೇ ಇರುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳ ಗ್ರಾಮವಾರು ವಿವರವನ್ನು ಸಿದ್ಧಪಡಿಸಿ ಜಿ.ಪಂ. ಗೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ :ಕೋವಿಡ್ ಕಾರಣದಿಂದಾಗಿ ಇತ್ತೀಚೆಗಷ್ಟೇ ಶಾಲೆಗಳು ಪ್ರಾರಂಭವಾಗಿವೆ. ಶಾಲಾ ಮಕ್ಕಳು, ಶಿಕ್ಷಕರಿಗೆ ಕೋವಿಡ್ ತಪಾಸಣೆ ನಡೆಸುವುದು ಕಡ್ಡಾಯವೆಂದು ಸರ್ಕಾರ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ ಇತ್ತೀಚೆಗೆ ಪರೀಕ್ಷೆ ಕಡ್ಡಾಯವಲ್ಲ, ಕೋವಿಡ್ ಲಕ್ಷಣ ಇರುವವರಿಗೆ ಆರೋಗ್ಯ ಮಾತ್ರ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಡಿಹೆಚ್‍ಒ ಡಾ. ನಾಗರಾಜ್ ಹೇಳಿದರು.
ಜಿ.ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಶಾಲಾ ಮಕ್ಕಳ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ, ಹೀಗಾಗಿ ಎಲ್ಲ ಶಾಲೆ ಮಕ್ಕಳು ಹಾಗೂ ಹಾಸ್ಟೆಲ್‍ಗಳಲ್ಲಿರುವ ಮಕ್ಕಳ ಆರೋಗ್ಯವನ್ನು ಆಯಾ ವ್ಯಾಪ್ತಿಯ ಆಸ್ಪತ್ರೆಗಳ ವೈದ್ಯರು ಕನಿಷ್ಟ 15 ದಿನಗಳಿಗೊಮ್ಮೆ ತಪಾಸಣೆ ನಡೆಸುವ ಕಾರ್ಯ ಆಗಬೇಕು ಎಂದು ಸೂಚನೆ ನೀಡಿದರು.
ದೊಡ್ಡಪೇಟೆ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ. ನಾಗರಾಜ್ ಆಸ್ಪತ್ರೆಗೆ ಹಾಜರಾಗದೆ, ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಎಂಬ ದೂರು ಬಂದಿದೆ. ಈ ಕುರಿತು ಡಿಹೆಚ್‍ಒ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಸ್ಥಾಯಿಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಜನರಿಕ್ ಔಷಧಿ ಮಳಿಗೆ ತೆರೆಯಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯಕ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಫಕೀರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಜಿ.ಪಂ. ವ್ಯಾಪ್ತಿಯ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.



