ದಾವಣಗೆರೆ: ಲಿಂಗಾಯತ ಉಪ ಪಂಗಡಗಳ ಹೆಸರಿನಲ್ಲಿ 2ಎ ಜಾತಿ ಪ್ರಮಾಣ ಪತ್ರ ಪಡೆದು ಕುರುಬ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗೆ ಅನ್ಯಾಯವಾಗುತ್ತಿದೆ ಎಂದು ಕುರುಬ ಸಮಾಜದ ಮುಖಂಡ ಕೆಂಗೋ ಹನುಮಂತಪ್ಪ ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಈಗ ಅಧ್ಯಕ್ಷ ಸ್ಥಾನ ಹಿಡಿಯಲು ಸಹ ಲಿಂಗಾಯತ ಕುಂಬಾರ, ಲಿಂಗಾಯತ ಗಾಣಿಗ, ಲಿಂಗಾಯತ ಹಡಪದ ಸೇರಲ್ಲಿ 2ಎ ಜಾತಿ ಪ್ರಮಾಣ ಪಡೆದು ಕುರುಬ ಸಮುದಾಯವನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ 2ಎ ಮೀಸಲು ಬಂದಿದ್ದು, ಇಲ್ಲಿ ಕುರುಬರು ಅಧಿಕಾರ ಹಿಡಿಯಲಿದ್ದಾರೆ ಎಂಬ ಏಕೈಕ ಕಾರಣಕ್ಕೆ ಲಿಂಗಾಯತ ಕುಂಬಾರ ಸಮುದಾಯಕ್ಕೆ ಸೇರಿರುವ ಮಹಿಳಾ ಸದಸ್ಯೆಗೆ 2ಎ ಜಾತಿ ಪ್ರಮಾಣ ನೀಡುವಂತೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ತಹಶೀಲ್ದಾರ್ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಯಾರ ಪ್ರಭಾವಕ್ಕೂ ಮಣಿದು ಲಿಂಗಾಯತ ಉಪ ಪಂಗಡಗಳಿಗೆ 2ಎ ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಆಗ್ರಹಿಸಿದರು.
ಚನ್ನಗಿರಿ ತಾಲ್ಲೂಕಿನ ದೊಡ್ಡ ಮಲ್ಲಾಪುರ ಗ್ರಾಮದಲ್ಲಿಯೂ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿರುವ ಮಹಿಳಾ ಸದಸ್ಯೆಗೆ 2ಎ ಜಾತಿ ಪ್ರಮಾಣ ನೀಡಲಾಗಿದೆ. ಇದನ್ನು ತಕ್ಷಣವೇ ರದ್ದು ಪಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮಾಜದ ಹೆಚ್.ಬಿ.ಗೋಣೆಪ್ಪ, ಬಳ್ಳಾರಿ ಷಣ್ಮುಖಪ್ಪ, ಜೆ.ಕೆ.ಕೊಟ್ರಬಸಪ್ಪ, ಇಟ್ಟಿಗುಡಿ ಮಂಜುನಾಥ್, ಅರವಿಂದ್ ಹಾಲೇಕಲ್ಲು, ಷಣ್ಮುಖಪ್ಪ, ಪಿ.ರಾಜಕುಮಾರ್, ಉಮೇಶ್, ದಿಳ್ಯಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.



