ಬೆಂಗಳೂರು : ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಮಾಡದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಂದ್ ಹಿಂಪಡೆಯುವಂತೆ ಕನ್ನಡ ಸಂಘಟನೆಗಳನ್ನು ಸಿಎಂ ಮನವಿ ಮಾಡಿದ್ದಾರೆ.
ಬಂದ್ ಮಾಡಿದರೆ ನಿತ್ಯ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಬಂದ್ ಮಾಡುವ ಅಗತ್ಯವಿಲ್ಲ. ಸಮಾಜದ ಎಲ್ಲಾ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ದು ಅಭಿವೃದ್ಧಿಯತ್ತ ರಾಜ್ಯವನ್ನು ತಗೆದುಕೊಂಡು ಹೋಗುತ್ತಿದ್ದೇವೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಎಲ್ಲಾ ರಾಜ್ಯಗಳಲ್ಲಿ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ಗೆ ಪೊಲೀಸ್ ಆಯುಕ್ತರು ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದು, ಡಿ. 5ರ ಬೆಳಗ್ಗೆ 4:30ರಿಂದ ಹೊಯ್ಸಳ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಇನ್ನು, ವಿಶೇಷವಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಮೆಟ್ರೋ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಮರಾಠ ಪ್ರಾಧಿಕಾರ ರಚನೆ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ನಡೆಯುವುದು ಖಚಿತ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡಿಗರ ನಡುವಿನ ಸವಾಲ್ ಆಗಿದೆ ಎಂದಿದ್ದಾರೆ.



