ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಸ್ವೀಕಾರ ಮಾಡಿದ್ದಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೆಂಡಾಮಂಡಲರಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ವೀರಶೈವ ಲಿಂಗಾಯತರನ್ನು ಕಡಿಮೆ ತೋರಿಸುತ್ತಿದ್ದಾರೆ. ಅಗತ್ಯವಿದ್ರೆ ಖಾಸಗಿ ಸರ್ವೆ ಮಾಡಿಸುತ್ತೇವೆ ಕಿಡಿಕಾರಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಸುಮ್ಮನೆ ಕೂರುವುದಿಲ್ಲ. ವೀರಶೈವ ಸಮಾಜದ ಎಲ್ಲಾ ಉಪಜಾತಿಗಳು ಸೇರಿದರೆ ಎರಡು ಕೋಟಿಗೂ ಹೆಚ್ಚು ಜನಸಂಖ್ಯೆಯಾಗುತ್ತದೆ. ಅಗತ್ಯ ಬಿದ್ದರೆ ನಾವು ಖಾಸಗಿ ಸರ್ವೇ ಮಾಡಿಸುತ್ತೇವೆ ಎಂದು ಗುಡುಗಿದ್ದಾರೆ.
,ಸರ್ಕಾರ ಮುಂದೆ ಏನು ಮಾಡುತ್ತದೆ ಎಂಬುದನ್ನು ನೋಡುತ್ತೇವೆ. ನಾವು ಸುಮ್ಮನೆ ಕೂರೋದಿಲ್ಲ. ಉಪ ಪಂಗಡ ಸೇರಿ ಎರಡು ಕೋಟಿ ಮಂದಿ ಇದ್ದೇವೆ. ಅಗತ್ಯಬಿದ್ದರೆ ನಾವು ಖಾಸಗಿ ಸರ್ವೆ ಮಾಡಿಸುತ್ತೇವೆ. ನಮ್ಮ ಅಂಕಿ-ಅಂಶ ವೈಜ್ಞಾನಿಕವಾಗಿದೆ ಎಂದು ತೋರಿಸುತ್ತೇವೆ. ಸರಿಯಾದ ಜನಗಣತಿ ಮಾಡಲಿ. ಒಂಬತ್ತು ವರ್ಷ ಹಳೆಯದು ಇದು. ಕಾಂತರಾಜು ವರದಿಯಲ್ಲಿ ಇದ್ದಿದ್ದ ಅಂಶಗಳು ಇವು ಎಂದು ಹೇಳಿದರು.
ಈಗಿನ ವರದಿಯನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾಗಿದೆ. ಇನ್ನೂ ನಾವು ಖಾಸಗಿ ಸರ್ವೆ ಮಾಡಿಸಿಲ್ಲ. ಆ ಬಗ್ಗೆ ಆಲೋಚನೆ ಇದೆ. ಅವಶ್ಯಕತೆ ಬಿದ್ದರೆ ವೀರಶೈವ ಮಹಾಸಭಾದಿಂದ ಜನಗಣತಿ ಮಾಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಸರ್ಕಾರ ಈ ವರದಿಯನ್ನು ಏನು ಮಾಡುತ್ತದೆ ಎಂಬುದನ್ನು ನೋಡುತ್ತೇವೆ. ಅಹಿಂದ ಜನರು ಜಾಸ್ತಿ ಇದ್ದಾರೆ ಎಂಬುದನ್ನು ಇವತ್ತಿನ ಪತ್ರಿಕೆಗಳಲ್ಲಿ ನೋಡಿದೆ. ಎಲ್ಲರಿಗಿಂತ ವೀರಶೈವರು ಹೆಚ್ಚಾಗಿದ್ದಾರೆ. ವೈಜ್ಞಾನಿಕವಾಗಿ ವರದಿ ಮಾಡಿಸಲಿ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂತರಾಜು ಅವರು ಮನೆಯಲ್ಲಿ ಕುಳಿತು ಈ ವರದಿಯನ್ನು ಬರೆದಿದ್ದಾರೆ. ಸರ್ವೆ ಮಾಡಲು ಸರಿಯಾಗಿ ಮನೆಗಳಿಗೆ ಭೇಟಿ ನೀಡಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಬಗ್ಗೆ ಈಗ ಹೇಳಲ್ಲ. ಈ ಹಿಂದೆ ಲಿಂಗಾಯತ ವಿಚಾರದಲ್ಲಿ ಹಿನ್ನಡೆಯಾಗಿತ್ತು. ವರದಿ ಸ್ವೀಕಾರ ಮಾಡಿದ್ದು ತಪ್ಪಲ್ಲ. ಆದರೆ, ಅಂಗೀಕಾರ ಮಾಡಬಾರದು ಎಂದು ಶಾಮನೂರು ಶಿವಶಂಕರಪ್ಪ ಆಗ್ರಹಿಸಿದರು. ವೈಜ್ಞಾನಿಕವಾಗಿ ಮತ್ತೆ ಸರ್ವೆ ಮಾಡಬೇಕು ಎಂಬುದು ನಮ್ಮ ಸಮುದಾಯದ ಒತ್ತಾಯ ಎಂದರು.