ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಸಂಪುಟ ಪುನರ್ ರಚನೆ, ಸಂಪುಟ ವಿಸ್ತರಣೆ ವಿದ್ಯಾಮಾನ ನಡುವೆಯೇ, ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನನ್ನ ಸಂಪರ್ಕದಲ್ಲಿ 40 ಶಾಸಕರಿದ್ದಾರೆ. ಅವರೊಂದಿಗೆ ಸಭೆ ನಡೆಸುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಸದ್ಯದಲ್ಲೇ ನಾವು ಕೂಡ ಸಭೆ ಸೇರುತ್ತೇವೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎದುರು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ ಎಂದು ಗೊತ್ತಾಗಿದೆ. ಸಚಿವ ಸ್ಥಾನ ಬಿಡಲು ಕೆಲ ಸಚಿವರು ಒಪ್ಪುತ್ತಿಲ್ಲ ಎಂದು ಕಟೀಲ್ ಎದುರು ಅಸಮಾಧಾನ ತೋಡಿಕೊಂಡಿದ್ದಾರೆ.

ಸಿಎಂ ಮೇಲೆ ಒತ್ತಡ ಹೇರಲು ಕೆಲವರಿಂದ ಸಭೆ ನಡೆಸಲಾಗುತ್ತದೆ ಎಂದ ರೇಣುಕಾಚಾರ್ಯಗೆ ನಳೀನ್ ಕುಮಾರ್ ಕಟೀಲ್ ಅವರು, ಸಭೆ ನಡೆಸುವುದು ಬೇಡ. ನೀವು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ. ನಾನು ಸಿಎಂ ಜೊತೆ ಚರ್ಚಿಸುವೆ ಎಂಬುದಾಗಿ ರೇಣುಕಾಚಾರ್ಯ ಅವರನ್ನು ಸಮಾಧಾನ ಪಡಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುನ್ನವೇ ಅಸಮಾಧಾನ ಎದ್ದಿದೆ. ಈ ಬಾರಿ ಸಚಿವ ಸ್ಥಾನ ಪಡೆಯಲೇ ಬೇಕು ಎಂಬ ಜಿದ್ದಿಗೆ ರೇಣುಕಾಚಾರ್ಯ ಬಿದ್ದಂತೆ ಕಾಣುತ್ತಿದೆ.



