ಡಿವಿಜಿ ಸುದ್ದಿ, ದಾವಣಗೆರೆ: ನಿರೀಕ್ಷೆಯಂತೆ ಜಗಳೂರು ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ನೂತನ ಅಧ್ಯಕ್ಷರಾಗಿ ಆರ್.ತಿಪ್ಪೇಸ್ವಾಮಿ, ಮತ್ತು ಉಪಾಧ್ಯಕ್ಷರಾಗಿ ಲಲಿತಾ ಶಿವಣ್ಣ ಆಯ್ಕೆಯಾಗಿದ್ದಾರೆ.
ಮೀಸಲಾತಿ ಪ್ರಕಟಣೆಗೊಂಡ ಹಿನ್ನೆಲೆಯಲ್ಲಿ ಬಹುಮತ ಪಡೆದಿದ್ದ ಬಿಜೆಪಿ ಅಧಿಕಾರಕ್ಕೇರಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದರು.ಜಗಳೂರು ಕ್ಷೇತ್ರದ ಶಾಸಕ ಎಸ್.ವಿ ರಾಮಚಂದ್ರ ಸೂಚನೆಯ ಮೇರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಸುಮಾರು ಎರಡು ವರ್ಷ ನಂತರ ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು.
ಒಟ್ಟು 18 ಸದಸ್ಯರ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 11 , ಕಾಂಗ್ರೆಸ್ 05 , ಜೆಡಿಎಸ್ 02 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 5ನೇ ವಾರ್ಡಿನಲ್ಲಿ ಪರಿಶಿಷ್ಟ ವರ್ಗಗಳ ಮೀಸಲಾಗಿದ್ದ ಸ್ಥಾನದಿಂದ ಜಯಗಳಿಸಿ ಸತತ ಮೂರು ಬಾರಿ ಸದಸ್ಯರಾಗಿರುವ (ಎಂಎಲ್‌ಎ) ಆರ್.ತಿಪ್ಪೇಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. 7ನೇ ವಾರ್ಡಿನ ಸಾಮಾನ್ಯ ಮಹಿಳೆ ಸ್ಥಾನದಿಂದ ಗೆದ್ದಿರುವ ಟಿ.ಲಲಿತಾ ಶಿವಣ್ಣ ಇವರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.



