ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಸಾವಿನಿಂದ ಇಡೀ ಅಮೆರಿಕಾದಲ್ಲಿಯೇ ವರ್ಣಭೇದ ನೀತಿ ವಿರುದ್ಧ ಪ್ರತಿಭಟನೆ ಉಂಟಾಗಿದ್ದ ಪ್ರಕಣರಣಕ್ಕೆ ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಹಾರ ನೀಡಲು ಮಿನಿಯಾಪೊಲಿಸ್ ನಗರ ಕೌನ್ಸಿಲ್ ಮುಂದಾಗಿದೆ.
ಅಮೆರಿಕಾ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರ ಕುಟುಂಬಕ್ಕೆ 196.2 ಕೋಟಿ ರೂ. ಪಾವತಿಸಲು ಮಿನಿಯಾಪೊಲಿಸ್ ನಗರ ಕೌನ್ಸಿಲ್ ಒಪ್ಪಿಕೊಂಡಿದೆ.ಕಳೆದ ಮೇ 25 ರಂದು ಫ್ಲಾಯ್ಡ್ ಸಾಯುವ ಮುನ್ನ ಬಿಳಿ ವರ್ಣದ ಪೊಲೀಸ್ ಅಧಿಕಾರಿ ಡೆರೆಕ್ ಅವರ ಕತ್ತನ್ನು 9 ನಿಮಿಷಗಳ ಕಾಲ ಮೊಣಕಾಲಿನಿಂದ ಬಿಗಿಯಾಗಿ ಒತ್ತಿ ಹಿಡಿದಿದ್ದರು. ಫ್ಲಾಯ್ಡ್ ಸಾವು ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿತ್ತು.
ಕೌನ್ಸಿಲ್ ಸದಸ್ಯರು ಮೊದಲು ಖಾಸಗಿಯಾಗಿ ಚರ್ಚೆ ನಡೆಸಿದರು, ಬಳಿಕ ಬಹಿರಂಗ ಅಧಿವೇಶನದಲ್ಲಿ 196.2 ಕೋಟಿ ದೊಡ್ಡ ಮೊತ್ತದ ಪರಿಹಾರ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.ವಿಚಾರಣೆಯ ಆರಂಭದಲ್ಲೇ ಇತ್ಯರ್ಥಗೊಂಡ ಅತಿ ಹೆಚ್ಚಿನ ಮೊತ್ತ ಇದಾಗಿದೆ ಎಂದು ಫ್ಲಾಯ್ಡ್ ಕುಟುಂಬದ ಅಟಾರ್ನಿ ಬೆನ್ ಕ್ರಂಪ್ ಹೇಳಿದ್ದಾರೆ.



