ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಿಂದೂಗಳಿಗೆ ಬೆಳಕಿನ ಹಬ್ಬ ದೀಪಾವಳಿ ಶುಭಾಶಯವನ್ನು ಕೋರಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಪಾಕಿಸ್ತಾನದ ಎಲ್ಲಾ ಹಿಂದೂಗಳಿಗೆ ದೀಪಾವಳಿ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
Prime Minister @ImranKhanPTI wishes a happy #Diwali to all Hindu citizens. 🇵🇰 pic.twitter.com/QkyU2dyCc4
— Prime Minister's Office (@PakPMO) November 14, 2020
ಪಾಕಿಸ್ತಾನದಲ್ಲಿನ ಹಿಂದೂಗಳು ತಮ್ಮ ಮನೆಗಳು ಹಾಗೂ ದೇವಾಲಯಗಳನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಿ,ದೇಶಾದ್ಯಂತ ಉತ್ಸಾಹ ಹಾಗೂ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು, ಜನರಿಗೆ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಮಾಧ್ಯಗಳು ವರದಿ ಮಾಡಿವೆ.
ಕರಾಚಿ, ಲಾಹೋರ್ ಮತ್ತು ಇತರ ಪ್ರಮುಖ ನಗರಗಳಲ್ಲದೆ, ಮಾಟಿಯಾರಿ, ಟ್ಯಾಂಡೋ ಅಲ್ಲಾಹಾರ್, ತಾಂಡೋ ಮಹಮ್ಮದ್ ಖಾನ್, ಶಹಾದ್‌ಪುರ ಮತ್ತಿತರ ಕಡೆಗಳಲ್ಲಿ ಹಿಂದೂಗಳಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳು ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ, ಈ ಸಮುದಾಯದ ಪ್ರಕಾರ ಸುಮಾರು 90 ಲಕ್ಷ ಹಿಂದೂಗಳು ನೆಲೆಸಿರುವುದಾಗಿ ಹೇಳಲಾಗುತ್ತಿದೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.