ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಬೀಳುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆಗ್ನೇಯ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಸಿಡ್ನಿಯ ಉತ್ತರ ಭಾಗದಲ್ಲಿ 100 ವರ್ಷಗಳಲ್ಲೇ ದಾಖಲೆ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಪ್ರವಾಹಕ್ಕೆ ಸಾವಿರಾರು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. 200ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ನ್ಯೂ ಸೌತ್ ವೇಲ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ, ಸಿಡ್ನಿಯ ವಾಯುವ್ಯ ಗಡಿಯ ಕೆಲವು ಭಾಗಗಳಲ್ಲಿ ಅತಿದೊಡ್ಡ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕಳೆದ ವರ್ಷ ಅಭೂತಪೂರ್ವ ಹವಾಮಾನ-ಬದಲಾವಣೆಯ ಪರಿಣಾಮ ಕಾಳ್ಗಿಚ್ಚು ಹೊತ್ತಿಕೊಂಡಿದ್ದ ಅದೇ ಪ್ರದೇಶದಲ್ಲಿ ಈಗ ಪ್ರವಾಹ ಉಂಟಾಗಿದೆ. ದೀರ್ಘಕಾಲದ ಬರಗಾಲದ ನಂತರ ಸಿಡ್ನಿಯಲ್ಲಿ ಈಗ ಜಲದಿಗ್ಬಂಧನದ ಅನುಭವವಾಗುತ್ತಿದೆ.ಸಿಡ್ನಿಯ ವಿಶಾಲವಾದ ಹಾಕ್ಸ್‌ಬರಿ-ನೇಪಿಯನ್ ಕಣಿವೆ, ನದಿಗಳು 1961 ರಿಂದ ಕಾಣದ ಮಟ್ಟಕ್ಕೇರಿವೆ. ಸಿಡ್ನಿ ನಗರಕ್ಕೆ ಹೆಚ್ಚಿನ ಪ್ರಮಾಣದ ಕುಡಿಯುವ ನೀರನ್ನು ಒದಗಿಸುವ ವಾರಗಂಬ ಅಣೆಕಟ್ಟು ಶನಿವಾರ ಮಧ್ಯಾಹ್ನ ತುಂಬಿ ಹರಿಯುತ್ತಿದೆ. ರಾಜ್ಯದಾದ್ಯಂತ ಈವರೆಗೆ 18,000 ಜನರನ್ನು ಸ್ಥಳಾಂತರಿಸಲಾಗಿದ್ದು, ಸೋಮವಾರ ಬೆಳಿಗ್ಗೆ 2,000 ಜನರು ಸ್ಥಳಾಂತರಿಸುವ ಆದೇಶ ಮಾಡಲಾಗಿದೆ ಎಂದು ತುರ್ತು ಸೇವಾ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.