ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಯಿಂದ ಬರ್ಬರವಾಗಿ ಹಾಡಹಗಲೇ ಕಗ್ಗೊಲೆಯಾದ ನೇಹಾಳ ಪೋಷಕರಾದ ನಿರಂಜನ ಹಿರೇಮಠ ದಂಪತಿಗಳ ಮನೆಗೆ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು.
ನಿರಂಜನ ಹಿರೇಮಠ ದುಃಖ ತೃಪ್ತರಾಗಿ ಶ್ರೀಗಳೊಂದಿಗೆ ಮಗಳ ಹತ್ಯೆ ಬಗ್ಗೆ ಮಾತಾನಾಡಿ, ನೇಹಾಳನ್ನು ಪ್ರೀತಿ ಮಾಡುತ್ತಿದ್ದು, ಮದುವೆ ಮಾಡಿ ಕೊಡಿ ಎಂದು ಬೆನ್ನು ಬಿದ್ದಿದ್ದ. ನಾಲ್ಕೈದು ತಿಂಗಳಿನಿಂದ ಮದುವೆ ಮಾಡಿಕೊಡಿ ಎಂದು ಪೀಡಿಸುತ್ತಿದ್ದನು. ಆದರೆ , ನನ್ನ ಮಗಳು ನಿನ್ನನ್ನು ಇಷ್ಟಪಟ್ಟಿಲ್ಲ. ಹೆಚ್ಚಿನ ವ್ಯಾಸಂಗ ಮಾಡಿಸುತ್ತೇವೆ ಎಂದು ಫಯಾಜ್ಗೆ ಹೇಳಿದ್ದೇವು. ಈ ಕುರಿತು ಫಯಾಜ್ ತಂದೆ-ತಾಯಿಗೂ ದೂರವಾಣಿ ಕರೆ ಮಾಡಿ ತಿಳಿಸಿದ್ದಾಗಿ ಹೇಳಿದರು.
ಇಷ್ಟಾದರೂ ಫಯಾಜ್ ನೇಹಾಗೆ ಬೆದರಿಕೆ ಹಾಕಿದ್ದು, ನನ್ನನ್ನು ಮದುವೆಯಾಗದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಹೇಳಿದ್ದನಂತೆ. ಇದನ್ನು ನೇಹಾ ಪೋಷಕರ ಗಮನಕ್ಕೆ ತಂದಿದ್ದಳು. ಗುರುವಾರ ತನ್ನ ಕಾಲೇಜು ಆವರಣದಲ್ಲಿ ಫಯಾಜ್ ನಿಂದ ಹಲವಾರು ಬಾರಿ ಭೀಕರವಾಗಿ ಇರಿತಕ್ಕೊಳಗಾಗಿ ಹತ್ಯೆಯಾದಳು ಎಂದು ಗೋಳಾಡಿದರು. ನಿರಂಜನ ದುಃಖ ತಡೆಯಲಾಗದೆ ಈಗಲೂ ಚಿಕ್ಕಮಕ್ಳಳಂತೆ ಅಳುತ್ತಿದ್ದಾರೆ. ಅವರ ಪತ್ನಿ ಮಗಳ ಬಗ್ಗೆ, ಆಕೆಯ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳನ್ನು ತಿಳಿಸಿದರು.
ದುಃಖ ತೃಪ್ತರಾದ ಕುಟುಂಬಕ್ಕೆ ಶ್ರೀಗಳು, ದೈರ್ಯ ತುಂಬಿ ಬೇರೆ ಯಾವ ವಿಷಯದ ಬಗ್ಗೆಯೂ ಮಾತನಾಡುವ ಸಂದರ್ಭ ಇದಲ್ಲ. ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಇದೆ. ನಿರಂಜನ್ ಹಿರೇಮಠ ಅವರ ಜೊತೆಗೆ ನಾವಿದ್ದೇವೆ. ಅವರ ಮಗಳಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮುಂದುವರೆಯುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಇತರೆ ಮುಖಂಡರು ಇದ್ದರು.



