ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿಲ್ಲ. ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮನೆಯ ಮದ್ದಾಗಿ ಸಹ ಉಪಯೋಗಿಸಲಾಗುತ್ತಿದೆ. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ ಎಂಬ ಮೂರು ವಿಧಗಳಿವೆ. ಅವುಗಳಲ್ಲಿ ಬಿಳಿಜೀರಿಗೆಯನ್ನೇ ಹೆಚ್ಚಾಗಿ ಪಾಚಕಾಂಗಗಳ ಕಾಯಿಲೆಯಲ್ಲಿ ವಿಶೇಷವಾಗಿ ಉಪಯೋಗಿಸುತ್ತಾರೆ.ಇದೇ ಜೀರಿಗೆಯನ್ನು ನಾವು ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಿರುವುದು ಕೂಡ.
ಅತಿಯಾಗಿ ಬೆವರು ಬರುತ್ತಿದ್ದರೆ, ಬೆಳಿಗ್ಗೆ ಸಂಜೆ ಜೀರಿಗೆ ಪುಡಿಯನ್ನು ಬಿಸಿ ನೀರಿನ ಜೊತೆ ಕುಡಿಯುತ್ತಾ ಬಂದರೆ ಬೆವರುವುದು ಕಡಿಮೆಯಾಗುತ್ತದೆ.
ಪಿತ್ತ ವಿಕಾರದಿಂದ ತಲೆದೋರುವ ವಾಕರಿಕೆ, ಹೊಟ್ಟೆ ತೊಳಸುವಿಕೆ, ತಲೆ ಸುತ್ತವಿಕೆ ಇತ್ಯಾದಿ ತೊಂದರೆಗಳಿಗೆ, ಜೀರಿಗೆ, ಬೆಲ್ಲ ಮತ್ತು ಹುಣಸೆಹಣ್ಣನ್ನು ಸಮಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಕುಟ್ಟಿ, ಒಂದು ಹೆಬ್ಬೆಟ್ಟು ಗಾತ್ರ ತೆಗೆದುಕೊಂಡು ಬಾಯಲ್ಲಿಟ್ಟುಕೊಂಡು ಚಪ್ಪರಿಸಿ ರಸ ಹೀರುವುದರಿಂದ ಮೇಲಿನ ತೊಂದರೆ ಉಪಶಮನವಾಗುತ್ತದೆ. ಮಲಬದ್ಧತೆಯುಂಟಾದಾಗ ಮತ್ತು ಅಜೀರ್ಣವಾದಾಗ ಊಟಕ್ಕೆ ಮುಂಚೆ ಮತ್ತು ಊಟದ ನಂತರ ಜೀರಿಗೆಯನ್ನು ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುತ್ತದೆ ಮತ್ತು ಸುಲಭವಾಗಿ ಮಲವಿಸರ್ಜನೆಯಾಗುತ್ತದೆ.
ಚೇಳು ಕಡಿದಾಗ ಜೀರಿಗೆ ಪುಡಿಗೆ ಸ್ವಲ್ಪ ಸೈಧವಲವಣವನ್ನು ತುಪ್ಪದಲ್ಲಿ ಕಲೆಸಿ ಕಡಿದ ಜಾಗಕ್ಕೆ ಹಚ್ಚಿದರೆ ಕಡಿತದ ನೋವು ಉಪಶಮನವಾಗುತ್ತದೆ.
ಯಾರು ಸಣ್ಣಗಾಗಬೇಕು ಎಂದಿದ್ದಾರೋ ಅವರು ಬೆಳಗ್ಗೆದ್ದ ಕೂಡಲೆ ೧೦ ಗ್ರಾಂ ನಷ್ಟು ಜೀರಿಗೆಯನ್ನ ನೀರಿಗೆ ಹಾಕಿ ಕಾಯಿಸಿ ಕುಡಿದರೆ ಅದ್ಬುತವಾದ ಆರೋಗ್ಯ ಲಾಭಗಳು ನಮ್ಮದಾಗುವುದರ ಜೊತೆಗೆ ಅನವಶ್ಯಕ ಕೊಬ್ಬು ಕರಗಿ ದೇಹ ಶಕ್ತಿಯುತವಾಗುತ್ತದೆ.ಹೀಗೆ ಬೆಳಗ್ಗೆ ಎದ್ದ ಕೂಡಲೇ ಮಾಡುವುದರಿಂದ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವನ್ನು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಮಧುಮೇಹ ಇರುವವರು ಪ್ರತಿನಿತ್ಯ ಸೇವಿಸಿದರೆ ಒಳ್ಳೆಯದು. ಒಂದು ಚಮಚ ಜೀರಿಗೆಯನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿನ ಚರ್ಮ ಸಂಬಂಧಿ ರೋಗಗಳು ದೂರಾಗುತ್ತವೆ.