ದಾವಣಗೆರೆ: ಉತ್ತರ ಭಾರತದಲ್ಲಿ ಗಮನ ಸೆಳೆದಿರುವ ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲಿ ತುಂಗಭದ್ರಾ ನದಿ ದಡದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಜಿಲ್ಲೆಯ ಹರಿಹರದಲ್ಲಿ ಸುಮಾರು 30 ಕೋಟಿ ವೆಚ್ಚದಲ್ಲಿ ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ತುಂಗಭದ್ರಾ ಆರತಿ ಮಂಟಪ ನಿರ್ಮಾಣವಾಗಲಿದೆ. ತುಂಗಭದ್ರಾ 108 ಯೋಗ ಮಂಟಪಗಳ ನಿರ್ಮಾಣಕ್ಕೆ ಇಂದು ಸಿಎಂ ಶಂಕುಸ್ಥಾಪನೆ ಮಾಡಿದರು.ಈ ವೇಳೆ ಮುಖ್ಯಮಂತ್ರಿಗೆ ಸಚಿವರಾದ ನಿರಾಣಿ, ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ, ಶಾಸಕ ರಾಮಪ್ಪ, ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಹರಿಹರ ಪುಣ್ಯಕ್ಷೇತ್ರ ದೇಶದ ಗಮನ ಸೆಳೆಯಲಿದೆ. ಗಂಗಾ ಆರತಿಯಂತೆ ತುಂಗಭದ್ರಾ ಆರತಿ ಆದಷ್ಟು ಬೇಗ ಆರಂಭ ಆಗಲಿದೆ. ತುಂಗಭದ್ರಾ ಆರತಿ ಹಿನ್ನೆಲೆ ಈಗಾಲೇ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿ ದಡದಲ್ಲಿ ವಾಯು ವಿವಾರಕ್ಕೆ ಅನುಕೂಲ ಆಗುವಂತೆ ಮಾಡಲಾಗುವುದು. ಇಲ್ಲಿ 108 ಮಂಟಪಗಳ ನಿರ್ಮಾಣ ಆಗಲಿವೆ ಎಂದು ತಿಳಿಸಿದರು.
ವಚನಾನಂದ ಸ್ವಾಮೀಜಿ ಮಾತನಾಡಿ, ಭಾರತ ಹಿಂದೆ ಹಾವಾಡಿಗರ ದೇಶವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಹಿಂದು ಸನಾತನ ಧರ್ಮ ಪ್ರಚಾರಕ್ಕೆ ಬಂದಿದೆ. ಪ್ರಧಾನಿ ನಿರ್ಧಾರದಿಂದ ಗಂಗಾ ನದಿ ಶುದ್ಧವಾಗಿದೆ. ಈಗ ಗಂಗೆ ಪರಿಶುದ್ಧರಾಗಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ನಮಗೆ ಒಂದು ರೀತಿಯಲ್ಲಿ ಸ್ಫೂರ್ತಿ. ವಿದೇಶದಲ್ಲಿಗಳ ಭಾರತವನ್ನ ನೋಡುವ ದೃಷ್ಟಿ ಬದಲಾಗಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ. ಮೋದಿ ಅವರ ಭವ್ಯ ದಿವ್ಯ ಎಂದು ಒಂಬತ್ತು ನೂರು ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಇದೇ ರೀತಿ ಹರಿಹರ ಅಭಿವೃದ್ಧಿ ಪಡಿಸಬೇಕು ಎಂದರು.